ಕೋಲ್ಕತಾ : ಮೇಲ್ಛಾವಣಿ ಸೌರ ವಿದ್ಯುತ್ ವ್ಯವಸ್ಥೆಗಳನ್ನು ಅಳವಡಿಸಲು 1 ಕೋಟಿ ಕುಟುಂಬಗಳಿಗೆ 78,000 ಕೋ.ರೂ. ವರೆಗೆ ನೆರವು ನೀಡುವ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಇದರಿಂದ ಅವರು ಪ್ರತಿ ತಿಂಗಳು 300 ಯೂನಿಟ್ ಗಳ ವರೆಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ‘ಪ್ರಧಾನ ಮಂತ್ರಿ ಸೂರ್ಯ ಘರ್: ಮಫ್ತಿ ಬಿಜ್ಲಿ ಯೋಜನೆ’ಗೆ ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ. 75,021 ಕೋ. ರೂ. ವೆಚ್ಚದ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13ರಂದು ಲೋಕಾರ್ಪಣೆಗೊಳಿಸಿದ್ದರು ಎಂದರು.
ಈ ನಿರ್ಧಾರ ಕೇವಲ ಕುಟುಂಬಳಿಗೆ ನೆರವು ಹಾಗೂ ಸೌರ ವಿದ್ಯುತ್ ಘಟಕಗಳ ಆಂತರಿಕ ಉತ್ಪದನೆಗೆ ಉತ್ತೇಜನ ನೀಡುವುದು ಮಾತ್ರವಲ್ಲ. ಬದಲಾಗಿ 17 ಲಕ್ಷ ಜನರಿಗೆ ನೇರವಾಗಿ ಉದ್ಯೋಗ ನೀಡಲಿದೆ ಎಂದು ಸಚಿವರು ತಿಳಿಸಿದರು.
ಈ ಯೋಜನೆ ಅಡಿಯಲ್ಲಿ ಕೇಂದ್ರ ಹಣಕಾಸು ನೆರವು (ಸಿಎಫ್ಎ) ಮನೆಯ ಮೇಲ್ಛಾವಣಿ ಸೌರ ವಿದ್ಯುತ್ ಫಲಕಗಳನ್ನು ಒದಗಿಸಲಿದೆ. 2 ಕಿ.ವ್ಯಾ. ವ್ಯವಸ್ಥೆಗಳಿಗೆ ವೆಚ್ಚದ ಶೇ. 60 ನೆರವು, 2 ಹಾಗೂ 3 ಕಿ.ವ್ಯಾ. ನಡುವಿನ ಸಾಮರ್ಥ್ಯದ ವ್ಯವಸ್ಥೆಗಳಿಗೆ ಶೇ. 40 ಹೆಚ್ಚುವರಿ ವೆಚ್ಚ ನೀಡಲಾಗುವುದು. ಸಿಎಫ್ಎ 3 ಕಿ.ವ್ಯಾ. ಮಿತಿಯನ್ನು ಕೂಡ ವಿಧಿಸಲಿದೆ ಎಂದು ಅವರು ತಿಳಿಸಿದರು.