EBM News Kannada
Leading News Portal in Kannada

ಪರಿಷತ್‌ನಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ, ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ ತಿರಸ್ಕೃತ

0


ಬೆಂಗಳೂರು, ಫೆ.23: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಅನ್ನು ಶುಕ್ರವಾರದಂದು ವಿಧಾನ ಪರಿಷತ್‌ನಲ್ಲಿ ತಿರಸ್ಕರಿಸಲಾಯಿತು. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ವಿಧೇಯಕವನ್ನು ಪರಿಷತ್‌ನಲ್ಲಿ ಮಂಡಿಸಿದರು.

ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ನಿವ್ವಳ ಆದಾಯದಲ್ಲಿ ಶೇ.10ರಷ್ಟು ನಿಧಿ ಸಂಗ್ರಹ ಮಾಡುವುದು ಸರಿಯಲ್ಲ. 100 ಕೋಟಿ ರೂ. ಸಂಗ್ರಹ ಆದರೆ 10 ಕೋಟಿ ರೂ. ಸರಕಾರಕ್ಕೆ ಕೊಡಬೇಕು. ನಿವ್ವಳ ಖರ್ಚು ವೆಚ್ಚ ತೆಗೆದು ಅದರಲ್ಲಿ ಶೇ.10ರಷ್ಟು ತೆಗೆದುಕೊಂಡರೆ ಸರಿ. ಆದರೆ ಇಡೀ ಆದಾಯದಲ್ಲಿ ಶೇ.10ರಷ್ಟು ಪಡೆಯುವುದು ಸರಿಯಲ್ಲ ಎಂದರು.

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ 40 ಸಾವಿರಕ್ಕಿಂತ ಹೆಚ್ಚು ಅರ್ಚಕರಿದ್ದಾರೆ. 34,165 ದೇವಸ್ಥಾನಗಳ ಅರ್ಚಕರಿಗೆ ಮನೆ ಕಟ್ಟಲು ಅನುದಾನ ನೀಡುತ್ತೇವೆ. ಅರ್ಚಕರ ಮಕ್ಕಳ ಶಾಲಾ ಕಾಲೇಜು ಅಧ್ಯಯನಕ್ಕೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದ್ದು, ಇದಕ್ಕೆ 5 ಕೋಟಿ ರೂ. ಮೀಸಲಿಡುತ್ತೇವೆ. ಅರ್ಚಕರು ಮೃತಪಟ್ಟರೆ 2 ಲಕ್ಷ ರೂ. ನೀಡುತ್ತೇವೆ. ಅರ್ಚಕರಿಗೆ ವಿಮೆ ಕೂಡ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಅಂತಿಮವಾಗಿ ಉಪ ಸಭಾಪತಿ ಪ್ರಾಣೇಶ್ ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದರು. ವಿಧೇಯಕ ಪರ 7 ಮತ, ವಿಧೇಯಕದ ವಿರುದ್ಧ 18 ಮತ ಚಲಾವಣೆಯಾಗಿವೆ. ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವಿಧೇಯಕ ಪರಿಷತ್‌ನಲ್ಲಿ ತಿರಸ್ಕೃತವಾಯಿತು.

Leave A Reply

Your email address will not be published.