ಉತ್ತರಕಾಶಿ: ಸುಮಾರು 200 ಗಂಟೆಗೂ ಅಧಿಕ ಅವಧಿಯಿಂದ ಸುರಂಗದಲ್ಲಿ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಇದೇ ಮೊದಲ ಬಾರಿಗೆ ಈ ಕಾರ್ಮಿಕರಿಗಾಗಿ ಬಾಟಲಿಗಳಲ್ಲಿ ಬಿಸಿ ಕಿಚಡಿಯನ್ನು ಕಳುಹಿಸಲಾಗಿದೆ.
ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ 9 ದಿನಗಳ ಹಿಂದೆ ಸಂಭವಿಸಿದ ಕುಸಿತದಿಂದ 41 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಈ ಕಾರ್ಮಿಕರಿಗಾಗಿ ಕಿಚಡಿ ಸಿದ್ಧಪಡಿಸಿರುವ ಹೇಮಂತ್, ಇದೇ ಮೊದಲ ಬಾರಿಗೆ ಊಟವನ್ನು ಕಾರ್ಮಿಕರಿಗೆ ಕಳುಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ಈ ಆಹಾರವನ್ನು ಸುರಂಗದ ಒಳಕ್ಕೆ ಕಳುಹಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಬಿಸಿಯೂಟವನ್ನು ಕಳುಹಿಸಲಾಗುತ್ತಿದೆ. ತಜ್ಞರು ಶಿಫಾರಸ್ಸು ಮಾಡಿದ ಆಹಾರವನ್ನಷ್ಟೇ ಸಿದ್ಧಪಡಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ನಿರ್ಮಾಣ ಹಂತದ ಸಿಲ್ಕ್ಯಾರಾ- ಬಾರಾಕೋಟ್ ಸುರಂಗ ಮಾರ್ಗ ನವೆಂಬರ್ 12ರಂದು ಕುಸಿದಿದ್ದು, 41 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ. ಸೋಮವಾರ ಮುಂಜಾನೆ ಆರು ಇಂಚು ವ್ಯಾಸದ ಪೈಪ್, 2 ಕಿಲೋಮೀಟರ್ ನಿರ್ಮಿಸಿರುವ ಸುರಂಗದ ಕುಸಿದ ಭಾಗವನ್ನು ತಲುಪಿದೆ. ಪರ್ಯಾಯ ಲೈಫ್ಲೈನ್ ಮೂಲಕ ಆಹಾರ, ಮೊಬೈಲ್ ಹಾಗೂ ಚಾರ್ಜರ್ ಗಳನ್ನು ಕಳುಹಿಸಬಹುದಾಗಿದೆ ಎಂದು ಪರಿಹಾರ ಕಾರ್ಯಾಚರಣೆ ತಂಡದ ಮುಖ್ಯಸ್ಥ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.
ಕಾರ್ಮಿಕರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವೈದ್ಯರ ಸಲಹೆಯಂತೆ ಸೂಕ್ತ ಆಹಾರವನ್ನು ಒದಗಿಸಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳ ಮೂಲಕ ಬಾಳೆಹಣ್ಣು, ಸೇಬು, ಕಿಚಡಿ ಹಾಗೂ ದಾಲಿಯಾ ಕಳುಹಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.