ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್‌ರ ಮಗಳು ಪೂಜಾ ಮತ್ತು ಸೊಸೆ ರಾಹತ್ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯು ಆರೋಪಪಟ್ಟಿ ಸಲ್ಲಿಸಿದೆ. ದೇಶ್‌ಮುಖ್ ವಿರುದ್ಧದ ಹಫ್ತಾ ವಸೂಲಿ ಪ್ರಕರಣದಲ್ಲಿ, ಅವರಿಗೆ ಕ್ಲೀನ್‌ಚಿಟ್ ನೀಡುವ ಸಿಬಿಐಯ 2021ರ ಆಂತರಿಕ ಕರಡು ವರದಿಯನ್ನು ಸೋರಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಕರಡು ವರದಿಯನ್ನು ಪಡೆಯುವುದಕ್ಕಾಗಿ ಸಿಬಿಐ ಸಬ್ ಇನ್ಸ್‌ಪೆಕ್ಟರ್ ಅಭಿಶೇಕ್ ತಿವಾರಿಗೆ ಲಂಚ ನೀಡಿದ ಪ್ರಕರಣದಲ್ಲಿ ಪೂಜಾ ‘ಸಹ ಪಿತೂರಿಗಾರ್ತಿ’ ಎಂಬುದಾಗಿ ಇಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಪೂರಕ ಆರೋಪಪಟ್ಟಿಯಲ್ಲಿ ಸಿಬಿಐ ಆರೋಪಿಸಿದೆ. ಸಬ್ ಇನ್‌ಸ್ಪೆಕ್ಟರ್‌ಗೆ ಲಂಚ ನೀಡುವುದಕ್ಕಾಗಿ ಪೂಜಾ, ದೇಶ್‌ಮುಖ್‌ರ ವಕೀಲ ಆನಂದ್ ದಿಲೀಪ್ ಡಾಗರಿಗೆ ಸೂಚನೆ ನೀಡಿದ್ದಾರೆ ಮತ್ತು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ದೇಶ್‌ಮುಖ್ ವಿರುದ್ಧ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ‘‘ಬುಡಮೇಲುಗೊಳಿಸಲು’’ 2021 ಆ.29ರಂದು ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಗಿತ್ತು ಎಂದು ಸಿಬಿಐ ಅರೋಪಿಸಿದೆ.
ಮುಂಬೈಯ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳ ಮಾಲೀಕರಿಂದ ಅನಿಲ್ ದೇಶ್‌ಮುಖ್ ಕೋಟ್ಯಂತರ ರೂಪಾಯಿ ಹಫ್ತಾ ಪಡೆಯುತ್ತಿದ್ದರು ಎಂದು ಮುಂಬೈಯ ಮಾಜಿ ಪೊಲೀಸ್ ಕಮಿಶನರ್ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಈ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು.
‘‘ಅನಿಲ್ ದೇಶ್‌ಮುಖ್ ಅಪರಾಧ ಮಾಡಿಲ್ಲ’’ ಎಂಬುದಾಗಿ ಮಾಧ್ಯಮಗಳಿಗೆ ಸೋರಿಕೆಗೊಳಿಸಲಾದ ಸಿಬಿಐ ವರದಿಯು ಹೇಳಿತ್ತು. ವರದಿ ಸೋರಿಕೆಗೆ ಸಂಬಂಧಿಸಿ ಸಿಬಿಐ ತನ್ನ ಸಬ್ ಇನ್ಸ್‌ಪೆಕ್ಟರ್ ಅಭಿಶೇಕ್ ತಿವಾರಿ ಮತ್ತು ದೇಶ್‌ಮುಖ್‌ರ ವಕೀಲ ಡಾಗ ಅವರನ್ನು ಬಂಧಿಸಿತ್ತು.