EBM News Kannada
Leading News Portal in Kannada

ಏರ್ ಇಂಡಿಯಾ ಪ್ರಯಾಣಿಕರಿಗೆ ಬೆದರಿಕೆ ; ಎನ್‌ಐಎಯಿಂದ ಪನ್ನೂನ್ ವಿರುದ್ಧ ಪ್ರಕರಣ ದಾಖಲು

0ಹೊಸದಿಲ್ಲಿ: ನ .19ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವರಿಗೆ ಜೀವ ಬೆದರಿಕೆ ಒಡ್ಡಿದ ವೀಡಿಯೊ ಕುರಿತಂತೆ ಖಾಲಿಸ್ಥಾನ ಪರ ಗುಂಪು ‘ಸಿಕ್ಖ್ ಫಾರ್ ಜಸ್ಟಿಸ್’ನ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಪ್ರಕರಣ ದಾಖಲಿಸಿದೆ.

ಪನ್ನೂನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ, 153ಎ ಹಾಗೂ 506ರ ಅಡಿಯಲ್ಲಿ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 10, 13, 16, 17, 18, 18ಬಿ ಹಾಗೂ 20ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಐಎಯ ಹೇಳಿಕೆ ತಿಳಿಸಿದೆ.

ನ.4ರಂದು ಬಿಡುಗಡೆ ಮಾಡಿದ ವೀಡಿಯೊದಲ್ಲಿ ಪನ್ನೂನ್, ತಾನು ಹೇಳಿದ ಹಾಗೂ ಅನಂತರದ ದಿನಾಂಕದಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಸಿಕ್ಖರಲ್ಲಿ ವಿನಂತಿಸಿದ್ದ. ಹಾಗೆ ಮಾಡಿದರೆ, ನಿಮ್ಮ ಜೀವಕ್ಕೆ ಅಪಾಯ ಇದೆ ಎಂದು ಹೇಳಿದ್ದ.

ಅಲ್ಲದೆ, ವಿಶ್ವದಲ್ಲಿ ಏರ್ ಇಂಡಿಯಾಕ್ಕೆ ಕಾರ್ಯಾಚರಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದ. ಪನ್ನೂನ್ ಪ್ರತಿಪಾದನೆ ಹಾಗೂ ಬೆದರಿಕೆ ಏರ್ ಇಂಡಿಯಾ ವಿಮಾನಗಳು ಸಂಚರಿಸುತ್ತಿರುವ ಕೆನಡಾ, ಇಂಡಿಯಾ ಹಾಗೂ ಇತರ ದೇಶಗಳಲ್ಲಿ ಭದ್ರತಾ ಪಡೆ ಮುನ್ನೆಚ್ಚರಿಕೆ ಘೋಷಿಸಲು ಹಾಗೂ ತನಿಖೆ ಆರಂಭಿಸಲು ಕಾರಣವಾಗಿತ್ತು.

ಪಂಜಾಬ್‌ನಲ್ಲಿ ಚಾಲ್ತಿಯಲ್ಲಿರುವ ವಿಷಯಗಳ ಸುತ್ತ ನಕಲಿ ನಿರೂಪಣೆಯನ್ನು ಪನ್ನೂನ್ ಸೃಷ್ಟಿಸುತ್ತಿದ್ದಾನೆ. ಮುಖ್ಯವಾಗಿ ಸಿಕ್ಖ್ ಧರ್ಮಕ್ಕೆ ಸಂಬಂಧಿಸಿದಂತೆ, ದೇಶದಲ್ಲಿ ಸಿಕ್ಖ್ ಸಮುದಾಯ ಹಾಗೂ ಇತರ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸುತ್ತಿದ್ದಾನೆ ಎಂದು ಎನ್‌ಐಎ ಹೇಳಿದೆ.

Leave A Reply

Your email address will not be published.