EBM News Kannada
Leading News Portal in Kannada

ಉತ್ತರಾಖಂಡ ಸುರಂಗ ಕುಸಿತ: ಅಂತರರಾಷ್ಟ್ರೀಯ ಸುರಂಗ ನಿರ್ಮಾಣ ತಜ್ಞ ಪರಿಶೀಲನೆ

0ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು ಸಿಲುಕಿರುವ 41 ಕಾರ್ಮಿಕರ ರಕ್ಷಣೆಯ ಭಾಗವಾಗಿ ಅಂತರ ರಾಷ್ಟ್ರೀಯ ಸುರಂಗ ನಿರ್ಮಾಣ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಸುರಂಗದ ಸ್ಥಳದಲ್ಲಿ ಸೋಮವಾರ ಪರಿಶೀಲನೆ ನಡೆಸಿದ್ದಾರೆ.

‘ದಿ ಇಂಟರ್‌ನ್ಯಾಷನಲ್ ಟನಲಿಂಗ್ ಆ್ಯಂಡ್ ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಶನ್’ ಅಧ್ಯಕ್ಷ ಅರ್ನಾಲ್ಡ್ ಡಿಕ್ಸ್ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಉತ್ತರಕಾಶಿಯ ಸಿಲ್ಕ್ಯಾರಕ್ಕೆ ಆಗಮಿಸಿದ್ದಾರೆ. ಅಲ್ಲದೆ, ಮುಂದುವರಿದಿರುವ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಕುರಿತು ಆಶಾವಾದ ವ್ಯಕ್ತಪಡಿಸಿದ್ದಾರೆ.

ಸುರಂಗ ಹಾಗೂ ಲಂಬ ರಂದ್ರ ಕೊರೆಯುವ ಕಾರ್ಯಾಚರಣೆ ನಡೆಯಲಿರುವ ಸುರಂಗದ ಮೇಲಿನ ಸ್ಥಳವನ್ನು ಪರಿಶೀಲನೆ ನಡೆಸಿದ ಬಳಿಕ ಪ್ರೊಫೆಸರ್ ಡಿಕ್ಸ್ ಅವರು ರಕ್ಷಣಾ ಕಾರ್ಯಾಚರಣೆ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.

‘‘ಪರಿಸ್ಥಿತಿ ಅನುಕೂಲಕರವಾಗಿರುವಂತೆ ಕಾಣುತ್ತಿದೆ. ಆದರೆ, ಇದು ಅನುಕೂಲಕರವಾಗಿದೆಯೇ ಅಥವಾ ಮೋಸದ ಬಲೆಯೇ ಎಂದು ನಾವು ನಿರ್ಧರಿಸಬೇಕು. ಈ ಕಾರ್ಯಕ್ಕಾಗಿ ನಾನು ಹಿಮಾಲಯದ ಭೂವಿಜ್ಞಾನ ತಜ್ಞರನ್ನು ಕರೆದು ತಂದಿದ್ದೇನೆ. ಅವರಲ್ಲಿ ನಾನು ಕೂಡ ಒಬ್ಬ’’ ಎಂದು ಪ್ರೊಫೆಸರ್ ಡಿಕ್ಸ್ ಹೇಳಿದ್ದಾರೆ.

ಈ ನಡುವೆ ಸಿಲ್ಕ್ಯಾರ ಸುರಂಗ ಕುಸಿದ ಸ್ಥಳದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ 9ನೇ ದಿನ ಕೂಡ ಮುಂದುವರಿದಿದೆ. ಉತ್ತರಾಖಂಡ ಸರಕಾರ ಹಾಗೂ ಕೇಂದ್ರ ಸರಕಾರ ನಿರಂತರ ಸಂಪರ್ಕದಲ್ಲಿದೆ ಹಾಗೂ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರಂಗದ ಒಳಗೆ ವಿದ್ಯುತ್ ಹಾಗೂ ನೀರಿನ ಪೂರೈಕೆ ಇದೆ. ಕಾರ್ಮಿಕರಿಗೆ 4 ಇಂಚಿನ ಕಂಪ್ರೆಸರ್ ಪೈಪ್‌ಲೈನ್ ಮೂಲಕ ಆಹಾರ ಸಾಮಗ್ರಿ, ಒಣಹಣ್ಣು ಹಾಗೂ ಔಷಧಗಳನ್ನು ರವಾನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಕೇಂದ್ರ ಸರಕಾರ 5 ಅಂಶಗಳ ಕ್ರಿಯಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಸಾರಿಗೆ ಹಾಗೂ ಹೆದ್ದಾರಿ ಕಾರ್ಯದರ್ಶಿ ಅನುರಾಗ್ ಜೈನ್, 5 ಅಂಶಗಳ ಯೋಜನೆಯ ವಿವಿಧ ಆಯಮಗಳಲ್ಲಿ ಐದು ವಿಭಿನ್ನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

41 ಕಾರ್ಮಿಕರನ್ನು ರಕ್ಷಿಸಲು ಸಿಲ್ಕ್ಯಾರ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಫೋನ್ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸಂಸ್ಥೆಗಳ ನಡುವಿನ ಪರಸ್ಪರ ಸಹಕಾರದ ಮೂಲಕ ಅಗತ್ಯ ಇರುವ ರಕ್ಷಣಾ ಸಲಕರಣೆ ಹಾಗೂ ಸಂಪನ್ಮೂಲಗಳನ್ನು ಕೇಂದ್ರ ಸರಕಾರ ಒದಗಿಸಲಿದೆ ಎಂದು ಮೋದಿ ಅವರು ಹೇಳಿದ್ದಾರೆ. ಅಲ್ಲದೆ, ಕಾರ್ಮಿಕರನ್ನು ರಕ್ಷಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.