ಹೊಸದಿಲ್ಲಿ: ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತವು ಸೋತಾಗಿನಿಂದ ತಜ್ಞರು ಈ ಸೋಲಿನ ಹಿಂದಿನ ಕಾರಣಗಳನ್ನು ವಿಶ್ಲೇಷಿಸುತ್ತಿದ್ದಾರೆ. ಫೈನಲ್‌ವರೆಗೂ ಅಜೇಯವಾಗಿ ಸಾಗಿಬಂದಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ತಂಡ ಅಂತಿಮ ಪಂದ್ಯದಲ್ಲಿ ಸೋಲನ್ನಪ್ಪಲು ಕಳಪೆ ಬ್ಯಾಟಿಂಗ್‌ನಿಂದ ಹಿಡಿದು ಕ್ಷೇತ್ರರಕ್ಷಣೆಯಲ್ಲಿ ವೈಫಲ್ಯಗಳವರೆಗೂ ಕಾರಣಗಳು ಕೇಳಿಬರುತ್ತಲೇ ಇವೆ. ಆದರೆ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರು ಅತ್ಯಂತ ವಿಲಕ್ಷಣ ಕಾರಣವೊಂದನ್ನು ನೀಡಿದ್ದು, ಅದರಿಂದಾಗಿಯೇ ಅವರ ಪೋಸ್ಟ್ ವೈರಲ್ ಆಗಿದೆ. ಆಸ್ಟ್ರೇಲಿಯಾ ಪಾಂಡವರ ಕಾಲದಲ್ಲಿ ಭಾರತದ ಶಸ್ತ್ರಾಗಾರವಾಗಿತ್ತು ಮತ್ತು ಅದೇ ಕಾರಣದಿಂದ ಅದು ಪಂದ್ಯವನ್ನು ಗೆದ್ದಿದೆ ಎಂದು ನ್ಯಾ.ಕಾಟ್ಜು ಪ್ರತಿಪಾದಿಸಿದ್ದಾರೆ.
‘‘ಆಸ್ಟ್ರೇಲಿಯಾ ಪಾಂಡವರ ‘ಅಸ್ತ್ರಗಳ’ ದಾಸ್ತಾನು ಕೇಂದ್ರವಾಗಿತ್ತು. ಅದನ್ನು ‘ಅಸ್ತ್ರಾಲಯ’ ಎಂದು ಕರೆಯಲಾಗುತ್ತಿತ್ತು. ಅದು ವಿಶ್ವಕಪ್ ಗೆದ್ದಿರುವುದಕ್ಕೆ ಇದು ನಿಜವಾದ ಕಾರಣವಾಗಿದೆ’’ ಎಂದು ನ್ಯಾ.ಕಾಟ್ಜು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ತನ್ನ ವಿಲಕ್ಷಣ ಸಿದ್ಧಾಂತಕ್ಕೆ ಯಾವುದೇ ಪುರಾವೆ ಅಥವಾ ಸಂದರ್ಭವನ್ನು ನ್ಯಾ.ಕಾಟ್ಜು ನೀಡಿಲ್ಲ. ಈ ವಿಲಕ್ಷಣ ಸಿದ್ಧಾಂತಕ್ಕೆ ನೆಟ್ಟಿಗರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
‘ಧನ್ಯವಾದಗಳು ಸರ್,ನಿಮ್ಮ ಹಾಸ್ಯದ ಮೂಲಕ ನಮ್ಮನ್ನು ರಂಜಿಸದೆ ಕೆಲವು ಸಮಯವಾಗಿತ್ತು’ ಎಂದು ಓರ್ವ ಬಳಕೆದಾರ ಹೇಳಿದ್ದರೆ, ಇನ್ನೋರ್ವ ಬಳಕೆದಾರರು ‘ದುಬೈ ಅನ್ನು ದುಬೆ, ಈಜಿಪ್ಟ್ (ಹಿಂದಿಯಲ್ಲಿ ಮಿಸ್ರ)ನ್ನು ಮಿಶ್ರಾ, ಇಸ್ರೇಲ್‌ನ್ನು ಯಾದವರು, ಬಹ್ರೈನ್ ಅನ್ನು ಬ್ರಹ್ಮದೇವ ಮತ್ತು ಸೌದಿ ಅರೇಬಿಯವನ್ನು ಸರಸ್ವತಿ ದೇವಿ ನಿರ್ಮಿಸಿದ್ದರು’ ಎಂದು ಕುಟುಕುವ ಮೂಲಕ ನ್ಯಾ.ಕಟ್ಜು ಅವರನ್ನು ಗೇಲಿ ಮಾಡಿದ್ದಾರೆ.
Australia was the storage centre of the ‘Astras’ of Pandavas. It was called ‘Astralaya’. This is the real reason why they won the World Cup.
— Markandey Katju (@mkatju) November 20, 2023