ಹೊಸದಿಲ್ಲಿ: ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ಛಾಟಿ ಬೀಸಿದೆ. ಕೇಂದ್ರ ಸರಕಾರವು ಇನ್ನೂ ಯಾಕೆ ಹೈಕೋರ್ಟ್ ನ್ಯಾಯಾಧೀಶರ ಹೆಸರುಗಳನ್ನು ಸುಪ್ರೀಂ ಕೋರ್ಟ್ ಕೊಲೀಜಿಯಮ್ ಗೆ ಶಿಫಾರಸು ಮಾಡಿಲ್ಲ ಎಂದು ನ್ಯಾಯಾಲಯವು ಪ್ರಶ್ನಿಸಿತು.
ಹೈಕೋರ್ಟ್ ನ್ಯಾಯಾಧೀಶರ ಹೆಸರುಗಳನ್ನು ಅಂತಿಮಗೊಳಿಸುವಲ್ಲಿ ಸರಕಾರವು ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯ ಅವರನ್ನೊಳಗೊಂಡ ನ್ಯಾಯಪೀಠವು, ತಾನು ಈ ವಿಷಯವನ್ನು ನಿಕಟವಾಗಿ ಗಮನಿಸುತ್ತಿದ್ದೆನೆ ಎಂದು ಹೇಳಿತು.
‘‘ಹೈಕೋರ್ಟಿನ ಎಂಟು ಹೆಸರುಗಳು 10 ತಿಂಗಳುಗಳಿಂದ ಬಾಕಿಯಾಗಿವೆ. ನಿಮ್ಮ ನಿಲುವನ್ನು ಪ್ರಕಟಿಸಬೇಕು. ಬಳಿಕ ಕೊಲೀಜಿಯಮ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಸರಕಾರವನ್ನು ಉದ್ದೇಶಿಸಿ ಮಾತನಾಡುತ್ತಾ ನ್ಯಾ. ಕೌಲ್ ಹೇಳಿದರು.
26 ನ್ಯಾಯಾಧೀಶರ ವರ್ಗಾವಣೆ ಮತ್ತು ‘‘ಸೂಕ್ಷ್ಮ ಹೈಕೋರ್ಟ್ ಒಂದರ’’ ಮುಖ್ಯ ನ್ಯಾಯಾಧೀಶರ ನೇಮಕಾತಿ ಬಾಕಿಯಾಗಿದೆ ಎಂದು ನ್ಯಾಯಪೀಢ ಹೇಳಿತು.
‘‘ಹೈಕೋರ್ಟ್ ಶಿಫಾರಸು ಮಾಡಿರುವ ಆದರೆ ಕೊಲೀಜಿಯಮ್ ಗೆ ಬಾರದಿರುವ ಎಷ್ಟು ಹೆಸರುಗಳು ಇವೆ ಎಂಬ ಮಾಹಿತಿ ನನಗಿದೆ’’ ಎಂದು ನ್ಯಾ. ಕೌಲ್ ಹೇಳದಿರು.
ಇದಕ್ಕೆ ಪ್ರತಿಕ್ರಿಯಿಸಲು ಒಂದು ವಾರದ ಸಮಯಾವಕಾಶ ನೀಡುವಂತೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಕೋರಿದರು. ಪ್ರಕರಣದ ವಿಚಾರಣೆ ಇನ್ನು ಅಕ್ಟೋಬರ್ 9ರಂದು ನಡೆಯಲಿದೆ.
‘‘ನನಗೆ ಹೇಳಲು ತುಂಬಾ ಇದೆ. ಆದರೆ, ನಾನು ಸಂಯಮ ವಹಿಸುತ್ತಿದ್ದೇನೆ. ಒಂದು ವಾರ ಸಮಯಾವಕಾಶವನ್ನು ಅಟಾರ್ನಿ ಜನರಲ್ ಕೋರಿದ್ದಾರೆ. ಹಾಗಾಗಿ ನಾನು ವೌನವಾಗಿದ್ದೇನೆ. ಆದರೆ ಮುಂದಿನ ವಿಚಾರಣೆಯಲ್ಲಿ ನಾನು ವೌನವಾಗಿರುವುದಿಲ್ಲ’’ ಎಂದು ನ್ಯಾ. ಕೌಲ್ ಹೇಳಿದರು.