ಹೊಸದಿಲ್ಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದು ದಾನಿಶ್ ಅಲಿ ಅವರ ನಡವಳಿಕೆಯ ಬಗ್ಗೆ ತನಿಖೆಗೆ ಒತ್ತಾಯಿಸಿದ ಕೆಲವೇ ಗಂಟೆಗಳ ನಂತರ, ಬಹುಜನ ಸಮಾಜ ಪಕ್ಷದ ಸಂಸದ ತಮ್ಮ ಮೇಲೆ ಕೋಮು ನಿಂದನೆ ಎಸೆದ ಸದಸ್ಯ ರಮೇಶ್ ಬಿಧೂರಿಯನ್ನು ಪ್ರಚೋದಿಸಲು ತಾನು ಏನೂ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೇಳಿರುವ ಆಕ್ಷೇಪಾರ್ಹ ಪದಗಳನ್ನು ದಾಖಲೆಯಿಂದ ತೆಗೆದುಹಾಕಬೇಕು ಎಂದಷ್ಟೇ ತಾನು ಒತ್ತಾಯಿಸಿದ್ದೇನೆ ಎಂದು ದಾನಿಶ್ ಅಲಿ ಪ್ರತಿಪಾದಿಸಿದ್ದಾರೆ.
ಬಿಧೂರಿ ಲೋಕಸಭೆಯಲ್ಲಿ ಚಂದ್ರಯಾನ-3ರ ಯಶಸ್ಸಿನ ಕುರಿತು ಚರ್ಚೆ ನಡೆಸುತ್ತಿದ್ದಾಗ ಬಹುಜನ ಸಮಾಜ ಪಕ್ಷದ ಸಂಸದ ದಾನಿಶ್ ಅಲಿಯವರನ್ನು ಗುರಿಯಾಗಿರಿಸಿ ಪದೇ ಪದೇ ಭಯೋತ್ಪಾದಕ ಎಂದು ಕರೆಯುತ್ತಿರುವುದು ಕಂಡುಬಂದಿತು. ಇದಕ್ಕೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕಠಿಣ ಎಚ್ಚರಿಕೆಯನ್ನು ನೀಡಿದರು. ಬಿಧುರಿ ಅವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ.
ಬಿಧೂರಿ ಹೇಳಿಕೆಗೆ ಭಾರೀ ವಿರೋಧ ಎದುರಿಸುತ್ತಿರುವ ಬಿಜೆಪಿ, ಬಿಧೂರಿಗೆ ಶೋಕಾಸ್ ನೋಟಿಸ್ ಕಳುಹಿಸಿದೆ. 15 ದಿನಗಳಲ್ಲಿ ಅವರ ಅಸಂಸದೀಯ ಭಾಷೆಯ ಬಗ್ಗೆ ವಿವರಣೆಯನ್ನು ನೀಡುವಂತೆ ಕೇಳಿದೆ. ಬಿಧೂರಿಯ ವಿವಾದಾತ್ಮಕ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸದನದಲ್ಲಿ ವಿಷಾದ ವ್ಯಕ್ತಪಡಿಸಿದ್ದರು.