ತಿರುವನಂತಪುರಂ : ಶುಕ್ರವಾರ ಎನ್ಡಿಎಗೆ ಜೆಡಿ(ಎಸ್) ಸೇರ್ಪಡೆಗೊಂಡಿರುವು, ಪಕ್ಷದ ಕೇರಳ ಘಟಕಕ್ಕೆ ಈಗ ನುಂಗಲಾರದ ತುತ್ತಾಗಿದೆ. ಪಕ್ಷವು ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ ಡಿ ಎಫ್) ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪಿಣರಾಯಿ ವಿಜಯನ್ ನೇತೃತ್ವದ ಸಂಪುಟದಲ್ಲಿ ಸಚಿವರೂ ಆಗಿದ್ದಾರೆ ಎಂದು news18.com ವರದಿ ಮಾಡಿದೆ.
ಕೇರಳದಲ್ಲಿ ಪಕ್ಷದ ಘಟಕವು ಎನ್‌ಡಿಎ ಭಾಗವಾಗುವುದಿಲ್ಲ ಮತ್ತು ಬಿಜೆಪಿಯನ್ನು ಬೆಂಬಲಿಸಲು ಸಾಧ್ಯವಿಲ್ಲದ ಕಾರಣ ಎಲ್‌ಡಿಎಫ್‌ನೊಂದಿಗೆ ಉಳಿಯುತ್ತೇವೆ ಎಂದು ಸ್ಪಷ್ಟಪಡಿಸಿದೆ. ಮ್ಯಾಥ್ಯೂ ಟಿ ಥಾಮಸ್ ಮತ್ತು ಕೆ ಕೃಷ್ಣನ್‌ಕುಟ್ಟಿ ಕೇರಳದಲ್ಲಿರುವ ಜೆಡಿ(ಎಸ್)ನ ಇಬ್ಬರು ಶಾಸಕರು. ಅದರಲ್ಲಿ ಕೆ ಕೃಷ್ಣನ್‌ಕುಟ್ಟಿ ವಿದ್ಯುತ್ ಸಚಿವರಾಗಿದ್ದಾರೆ.
ಕೇರಳದಲ್ಲಿ ಎಲ್‌ಡಿಎಫ್‌ನೊಂದಿಗೆ ಮುಂದುವರಿಯುತ್ತೇವೆ, ಯಾವುದೇ ಕಾರಣಕ್ಕೂ ಎನ್‌ಡಿಎ ಜೊತೆ ಹೋಗುವುದಿಲ್ಲ ಎಂದು ಜೆಡಿ (ಎಸ್) ರಾಜ್ಯಾಧ್ಯಕ್ಷರೂ ಆಗಿರುವ ಥಾಮಸ್ ಹೇಳಿದ್ದಾರೆ. “ಅಕ್ಟೋಬರ್ 7 ರಂದು, ನಾವು ಸಭೆ ಕರೆದಿದ್ದೇವೆ. ಚರ್ಚಿಸಿದ ಬಳಿಕ ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸುತ್ತೇವೆ. ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯಲಿದ್ದೇವೆ. ರಾಜಕೀಯ ಮತ್ತು ನಮ್ಮ ನಿಲುವು ಮುಖ್ಯ. ರಾಷ್ಟ್ರೀಯ ನಾಯಕತ್ವ ಬಿಜೆಪಿ ಸೇರಿದ ಮಾತ್ರಕ್ಕೆ ನಾವು ಬಿಜೆಪಿ ಮತ್ತು ಎನ್‌ಡಿಎಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಸಿಪಿಎಂಗೆ ತಮ್ಮ “ಬಿಜೆಪಿ ವಿರೋಧಿ” ನಿಲುವು ಪ್ರಾಮಾಣಿಕವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಹಾಗಿದ್ದಲ್ಲಿ ಜೆಡಿ (ಎಸ್) ಪಕ್ಷವನ್ನು ಎಲ್ ಡಿ ಎಫ್ ನಿಂದ ಹೊರಹಾಕುವಂತೆ ಹೇಳಿದ್ದಾರೆ.
ಜೆಡಿ(ಎಸ್), ಸಿಪಿಎಂ ಮತ್ತು ಎಲ್‌ಡಿಎಫ್ ಕೇರಳದ ಜನರ ಮುಂದೆ ತಮ್ಮ ಇಬ್ಬಗೆ ನೀತಿಯನ್ನು ತೋರಿಸುತ್ತಿದೆ ಎಂದು ಸತೀಶನ್ ಆರೋಪಿಸಿದ್ದಾರೆ.