ಕೊನೇ ಕ್ಷಣದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ನನ್ನ ಕಾರ್ಯಕ್ರಮ ರದ್ದುಗೊಳಿಸಿತು: ತೀಸ್ತಾ ಸೆಟಲ್ವಾಡ್ ಆರೋಪ
ಹೊಸದಿಲ್ಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್‌ನಂತಹ ಪ್ರತಿಷ್ಠಿತ ಸಂಸ್ಥೆಯ ಆಡಳಿತ ಕೊನೇ ಕ್ಷಣದಲ್ಲಿ ಸಭೆ ರದ್ದುಗೊಳಿಸಿದ್ದರಿಂದ ಉಪನ್ಯಾಸ ನೀಡುವುದರಿಂದ ತಮ್ಮನ್ನು ತಡೆಯಲಾಯಿತು ಎಂದು ಮಾನವ ಹಕ್ಕು ಹೋರಾಟಗಾರ್ತಗಿ ತೀಸ್ತಾ ಸೆಟಲ್ವಾಡ್ ತಿಳಿಸಿದ್ದಾರೆ.
‘ಬ್ರೇಕ್ ದಿ ಸೈಲನ್ಸ್’ ಎಂಬ ಸಂಘಟನೆಯು ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಆಯೋಜಿಸಿದ್ದ ಈ ಉಪನ್ಯಾಸ ಕಾರ್ಯಕ್ರಮಕ್ಕಾಗಿ ಅಲ್ಲಿನ ಸಿಸಿಇ ಉಪನ್ಯಾಸ ಸಭಾಂಗಣವನ್ನು ಬುಕ್ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕಾಗಿ 40ಕ್ಕೂ ಅಧಕ ಪ್ರೊಫೆಸರ್‌ಗಳು ಮತ್ತು ವಿದ್ಯಾರ್ಥಿಗಳು ಸೇರಿದ್ದರು ಎಂದು ತೀಸ್ತಾ ಹೇಳಿದ್ದಾರೆ.
“ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್‌ನಲ್ಲಿ ನನಗೆ ನಿನ್ನೆ ತುಂಬಾ ಅಸಹಜ ಅನುಭವವಾಯಿತು. “ಕೋಮು ಸೌಹಾರ್ದತೆ ಮತ್ತು ನ್ಯಾಯ” ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮಕ್ಕಾಗಿ ನನ್ನನ್ನು ಕೆಲ ಪ್ರೊಫೆಸರ್‌ಗಳು ಮತ್ತು ವಿದ್ಯಾರ್ಥಿಗಳು ಆಹ್ವಾನಿಸಿದ್ದರು. ಆದರೆ ಸಭೆಯನ್ನು ಕೊನೇ ಕ್ಷಣದಲ್ಲಿ ಅಲ್ಲಿನ ಆಡಳಿತ ರದ್ದುಗೊಳಿಸಿತು ಎಂದು ಅನಿಸುತ್ತದೆ,” ಎಂದು ತೀಸ್ತಾ ಹೇಳಿದ್ದಾರೆ.
ಸಂಸ್ಥೆಯ ಗೇಟ್ ಪ್ರವೇಶಿಸುವುದರಿಂದ ಕೂಡ ಆಡಳಿತ ತಮ್ಮನ್ನು ತಡೆದಿತ್ತು ಎಂದು ತೀಸ್ತಾ ಹೇಳಿದ್ದಾರೆ. ಆದರೂ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳು ಕ್ಯಾಂಟೀನ್ ಹೊರಗಿನ ಉದ್ಯಾನವನದಲ್ಲಿ ಕುಳಿತು “ನ್ಯಾಯ, ಶಾಂತಿ, ಭಾರತ ಈಗಿರುವ ನಿರ್ಣಾಯಕ ಘಟ್ಟ ಮತ್ತು ನಾಗರಿಕರು ಜೊತೆಯಾಗಿ ಶಾಂತಿ, ಸಾಮರಸ್ಯಕ್ಕಾಗಿ ಮತ್ತು ಅಸಮ್ಮತಿಯ ಅಭಿಪ್ರಾಯ ವ್ಯಕ್ತಪಡಿಸಲು ದನಿಯೆತ್ತುವ ಅಗತ್ಯದ ಬಗ್ಗೆ ಚರ್ಚಿಸಿದರು,” ಎಂದು ತೀಸ್ತಾ ಹೇಳಿದರು.
ತೀಸ್ತಾ ಅವರು ಕೋಮು ಗಲಭೆಗಳು ಹಾಗೂ ಭಾರತದಲ್ಲಿ ಮುಸ್ಲಿಮರು ಮತ್ತು ಅಸಮ್ಮತಿ ಸೂಚಕರ ಮೇಲಿನ ದಾಳಿಗಳ ಬಗ್ಗೆ ಮಾತನಾಡಿದರು ಎಂದು ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ.
ರದ್ದುಗೊಂಡ ತೀಸ್ತಾ ಅವರ ಅಧಿಕೃತ ಕಾರ್ಯಕ್ರಮದ ಬಗ್ಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಇನ್ನೂ ಪ್ರತಿಕ್ರಿಯಿಸಿಲ್ಲ.