EBM News Kannada
Leading News Portal in Kannada

ದೇಶವು ಮಣಿಪುರದ ಜನತೆಯೊಂದಿಗಿದೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ

0ಹೊಸ ದಿಲ್ಲಿ: “ಕಳೆದ ಕೆಲವು ವಾರಗಳಿಂದ ಮಣಿಪುರ ಸರಣಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಈ ಹಿಂಸಾಚಾರದಲ್ಲಿ ಹಲವಾರು ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ನಮ್ಮ ತಾಯಿ ಮತ್ತು ಸಹೋದರಿಯರಿಗೆ ಅಗೌರವ ತೋರಲಾಗಿದೆ. ಹೀಗಿದ್ದೂ, ಈ ಪ್ರಾಂತ್ಯದಲ್ಲಿ ನಿಧಾನವಾಗಿ ಶಾಂತಿ ಮರಳುತ್ತಿದೆ. ಭಾರತವು ಮಣಿಪುರದೊಂದಿಗೆ ನಿಲ್ಲಲಿದೆ” ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಣಿಪುರದಲ್ಲಿ ಶಾಂತಿಯನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ಮಣಿಪುರ ಹಿಂಸಾಚಾರದ ಕುರಿತು ಮಾತನಾಡಬೇಕು ಎಂದು ತಿಂಗಳುಗಟ್ಟಲೆ ವಿರೋಧ ಪಕ್ಷಗಳು ಆಗ್ರಹಿಸಿದ ನಂತರ, ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಸಂಘರ್ಷ ಪೀಡಿತ ಈಶಾನ್ಯ ರಾಜ್ಯವಾದ ಮಣಿಪುರದ ಕುರಿತು ಪ್ರಸ್ತಾಪಿಸಿದರು.

“ಕಳೆದ ಕೆಲವು ದಿನಗಳಲ್ಲಿ ಮರುಸ್ಥಾಪನೆಯಾಗಿರುವ ಶಾಂತಿಯನ್ನು ಮಣಿಪುರದ ಜನತೆ ನಿರ್ಮಿಸಬೇಕು. ಶಾಂತಿ ಮಾತುಕತೆಗಳ ಮೂಲಕ ಮಣಿಪುರದಲ್ಲಿ ಪರಿಹಾರ ತರಲಾಗುವುದು” ಎಂದೂ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದ ಕೊನೆಯಲ್ಲೂ ಮಣಿಪುರ ವಿಷಯವನ್ನು ಪ್ರಸ್ತಾಪಿಸಿ, ಸಮಗ್ರ ಅಭಿವೃದ್ಧಿಗಾಗಿ ಪರಸ್ಪರ ಗೌರವಿಸುವುದು ಹಾಗೂ ಪ್ರಾದೇಶಿಕ ಬಯಕೆಗಳನ್ನು ಈಡೇರಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದಾರೆ.

“ನಾನು ಒಗ್ಗಟ್ಟಿನ ಕುರಿತು ಮಾತನಾಡುವಾಗ ಮಣಿಪುರದಲ್ಲಿ ಹಿಂಸಾಚಾರವಿದ್ದರೆ, ಅದರ ನೋವನ್ನು ಮಹಾರಾಷ್ಟ್ರವೂ ಅನುಭವಿಸುತ್ತದೆ” ಎಂದು ಅವರು ಹೇಳಿದ್ದಾರೆ.

ತಮ್ಮ ಸತತ 10ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 140 ಕೋಟಿ ಭಾರತೀಯರನ್ನು ಕುಟುಂಬದ ಸದಸ್ಯರು ಎಂದು ಸಂಬೋಧಿಸಿ, ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ.

Leave A Reply

Your email address will not be published.