ಹೊಸದಿಲ್ಲಿ: ಸುಪ್ರೀಂ ಕೋರ್ಟ್ ತನ್ನ 9,423 ತೀರ್ಪುಗಳನ್ನು ಇಂಗ್ಲೀಷ್ ನಿಂದ 14 ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಮಂಗಳವಾರ ಹೇಳಿದ್ದಾರೆ. ನಾಲ್ಕು ತೀರ್ಪುಗಳನ್ನು ನೇಪಾಳಿ ಭಾಷೆಗೂ ಅನುವಾದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾಮಾನ್ಯ ಜನರಿಗೆ ಉಪಯೋಗವಾಗಲು ತನ್ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಿರುವ ಶ್ರಮಕ್ಕೆ ಸುಪ್ರೀಂ ಕೋರ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಶಂಸಿದ ಬಳಿಕ ಸುಪ್ರೀಂ ಕೋರ್ಟ್ ನ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಮಾತನಾಡಿದರು.
ಹಿಂದಿಗೆ ಅತ್ಯಧಿಕ ಸಂಖ್ಯೆಯ 8,977 ತೀರ್ಪುಗಳು ಅನುವಾದಗೊಂಡಿವೆ. ಅನಂತರ ತಮಿಳಿಗೆ 128, ಗುಜರಾತಿಗೆ 86, ಮಲಯಾಳಂ ಹಾಗೂ ಒಡಿಯಾಕ್ಕೆ ತಲಾ 50 ತೀರ್ಪುಗಳು ಅನುವಾದಗೊಂಡಿವೆ. ಸುಪ್ರೀಂ ಕೋರ್ಟ್ನ 33 ತೀರ್ಪುಗಳು ತೆಲುಗಿಗೆ, 31 ಬಂಗಾಳಿಗೆ, 24 ಕನ್ನಡಕ್ಕೆ, 20 ಮರಾಠಿಗೆ, 11 ಪಂಜಾಬಿಗೆ 4 ಅಸ್ಸಾಮಿಗೆ, 3 ಉರ್ದುವಿಗೆ, ತಲಾ 1 ಗರಾವೊ ಹಾಗೂ ಖಾಸಿ ಭಾಷೆಗೆ ಅನುವಾದಗೊಂಡಿವೆ. ಸುಪ್ರೀಂ ಕೋರ್ಟ್ ಈ ಅನುವಾದ ಯೋಜನೆಯನ್ನು 2019ರಲ್ಲಿ ಆರಂಭಿಸಿತ್ತು. ಇದರಿಂದ ಸಾರ್ವಜನಿಕರು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಓದಬಹುದು ಹಾಗೂ ಅರ್ಥ ಮಾಡಿಕೊಳ್ಳಬಹುದು. ಈ ಯೋಜನೆ ನ್ಯಾಯಮೂರ್ತಿ (ನಿವೃತ್ತ) ರಂಜನ್ ಗೊಗೋಯಿ ಅವರ ಅಧಿಕಾರಾವಧಿಯಲ್ಲಿ ಆರಂಭವಾಗಿತ್ತು.