EBM News Kannada
Leading News Portal in Kannada

ನಾವು ನಮ್ಮೊಳಗೆ ಜಗಳ ಮಾಡುತ್ತಿದ್ದರೆ ಭಾರತ ವಿಶ್ವ ಗುರುವಾಗುವುದು ಹೇಗೆ?: ಕೇಜ್ರಿವಾಲ್ ಪ್ರಶ್ನೆ

0



ಹೊಸದಿಲ್ಲಿ: ಭಾರತ ವಿಶ್ವ ಗುರು ಆಗಬೇಕಾದರೆ, ಜನರು ಸಾಮರಸ್ಯದಿಂದ ಜೀವಿಸಬೇಕು ಹಾಗೂ ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯಗಳು, ಅನಿಯಮಿತ ವಿದ್ಯುತ್ ಪೂರೈಕೆಯ ಭರವಸೆ ನೀಡಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ. ಉತ್ತರ ದಿಲ್ಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಸ್ವಾತೋತ್ರೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿಲ್ಲಿ ಹಾಗೂ ದೇಶದ ಜನರಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದರು. ಅಲ್ಲದೆ, ಸ್ವಾತಂತ್ರ್ಯ ಹೋರಾಟಗಾರರು, ಯೋಧರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿದರು. ದಿಲ್ಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆಯನ್ನು ಉಲ್ಲೇಖಿಸಿದ ಅವರು, ಪ್ರಾಕೃತಿಕ ವಿಕೋಪವನ್ನು ಜನರು ಕೇಂದ್ರ ಹಾಗೂ ನಗರಾಡಳಿತದೊಂದಿಗೆ ಎದುರಿಸಿದ್ದಾರೆ ಎಂದರು. ಮಣಿಪುರದ ಘಟನೆಗಳ ಬಗ್ಗೆ ಅವರು ಸಂತಾಪ ವ್ಯಕ್ತಪಡಿಸಿದರು.

‘‘ನನಗೆ ಇಂದು ಸ್ವಲ್ಪ ವಿಷಾದವಾಗುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಒಂದು ಸಮುದಾಯದ ಜನರು ಇನ್ನೊಂದು ಸಮುದಾಯದ ಜನರನ್ನು ಹತ್ಯೆಗೈಯುತ್ತಿದ್ದಾರೆ. ಹರ್ಯಾಣದಲ್ಲಿ ಕೂಡ ಒಂದು ಸಮುದಾಯದ ಜನರು ಇನ್ನೊಂದು ಸಮುದಾಯದ ಜನರೊಂದಿಗೆ ಘರ್ಷಣೆ ನಡೆಸುತ್ತಿದ್ದಾರೆ. ನಾವು ನಮ್ಮೊಳಗೆ ಜಗಳವಾಡುತ್ತಿರುವಾಗ ವಿಶ್ವ ಗುರು ಆಗುವುದು ಹೇಗೆ? ನಾವು ವಿಶ್ವ ಗುರುವಾಗಬೇಕಾದರೆ, ನಂಬರ್ 1 ದೇಶವಾಗಬೇಕಾದರೆ ನಾವೆಲ್ಲ ಒಂದೇ ಕುಟುಂಬದವರಂತೆ ಬದುಕಬೇಕು’’ ಎಂದು ಅವರು ಹೇಳಿದ್ದಾರೆ. ಹಿಂಸಾಚಾರ ಪೀಡಿತ ಮಣಿಪುರದ 150 ವಿದ್ಯಾರ್ಥಿಗಳಿಗೆ ದಿಲ್ಲಿ ಸರಕಾರ ನಡೆಸುತ್ತಿರುವ ಶಾಲೆಗಳಲ್ಲಿ ಪ್ರವೇಶ ಒದಗಿಸಲಾಗಿದೆ. ಅಲ್ಲದೆ ಅವರಿಗೆ ಸಮಾಲೋಚನೆ ಕೂಡ ನಡೆಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Leave A Reply

Your email address will not be published.