ಹೋಜೈ: ಮಾನಸಿಕ ಅಸ್ವಸ್ಥನಾಗಿದ್ದ ಯುವಕನೊಬ್ಬನನ್ನು ಥಳಿಸಿ ಹತ್ಯೆಗೈದಿರುವ ಘಟನೆಯೊಂದು ಅಸ್ಸಾಂನ ಹೋಜೈ ಜಿಲ್ಲೆಯಲ್ಲಿ ನಡೆದಿದೆ. ಸ್ವಘೋಷಿತ ಗೋರಕ್ಷಕ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿದ್ದರಿಂದ 23 ವರ್ಷದ ಹಿಫ್ಝುರ್ ರಹಮಾನ್ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆಯು ಆಗಸ್ಟ್ 12ರಂದು ಹೋಜೈ ಜಿಲ್ಲೆಯ ಲಂಕಾ ಪ್ರದೇಶದಲ್ಲಿನ ಬಮುನ್ ಗಾಂವ್ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಾನಸಿಕ ಆರೋಗ್ಯ ಸಮಸ್ಯೆ ಇದ್ದ 23 ವರ್ಷದ ರಹಮಾನ್ ಗೋಕಳ್ಳತನ ಮಾಡಿದ್ದಾನೆ ಎಂದು ಬಮುನ್ ಗಾಂವ್ ಗ್ರಾಮದ ನಿವಾಸಿಗಳು ಆರೋಪಿಸಿದ್ದರು. ಸ್ಥಳೀಯ ಮೂಲಗಳ ಪ್ರಕಾರ, ಈ ಹಿಂದೆ ಆ ಪ್ರದೇಶದಲ್ಲಿ ಗೋಕಳವು ಪ್ರಕರಣಗಳು ನಡೆದಿದ್ದರಿಂದ, ಗ್ರಾಮಸ್ಥರು ಆ ಕುರಿತು ತೀವ್ರ ನಿಗಾ ವಹಿಸಿದ್ದರೆನ್ನಲಾಗಿದೆ. ಇದೇ ಸಮಯದಲ್ಲಿ ರಹಮಾನ್ ಆ ಗ್ರಾಮವನ್ನು ಪ್ರವೇಶಿಸಿದ್ದು, ಇದರಿಂದ ಆತನ ವಿರುದ್ಧ ಅನುಮಾನಗಳು ಮೂಡಿವೆ ಎನ್ನಲಾಗಿದೆ.
ಗ್ರಾಮ ಪ್ರವೇಶಿಸಿದ ರಹಮಾನ್ ನನ್ನು ಅಡ್ಡಗಟ್ಟಿದ ಗುಂಪು, ಆತನನ್ನು ನಿರ್ದಯವಾಗಿ ಥಳಿಸಿದೆ. ಆತನ ಮಾನಸಿಕ ಅಸ್ವಸ್ಥತೆಯ ಹೊರತಾಗಿಯೂ ಕೇವಲ ಸಂಶಯದ ಕಾರಣಕ್ಕೆ ಆತನ ಮೇಲೆ ಬರ್ಬರವಾಗಿ ದಾಳಿ ನಡೆಸಲಾಗಿದೆ. ನಂತರ ಈ ಘಟನೆಯ ಕುರಿತು ದಾಳಿ ನಡೆಸಿದ ಗುಂಪು ಪೊಲೀಸರಿಗೆ ಮಾಹಿತಿ ನೀಡಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ತೀವ್ರವಾಗಿ ಗಾಯಗೊಂಡಿದ್ದ ರಹಮಾನ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು, ಆದರೆ ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು ಎಂದು ವರದಿಯಾಗಿದೆ.