ಹೊಸದಿಲ್ಲಿ: ನಗರ ಪ್ರದೇಶಗಳಲ್ಲಿ ಸ್ವಂತ ಮನೆ ನಿರ್ಮಿಸುವ ಕನಸು ಹೊಂದಿರುವವರಿಗೆ ಬ್ಯಾಂಕ್ ಸಾಲದಲ್ಲಿ ನಿರಾಳತೆಯನ್ನುಂಟು ಮಾಡುವ ಹೊಸ ಯೋಜನೆಯನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
77ನೇ ಸ್ವಾತಂತ್ರ್ಯ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಗರ ಪ್ರದೇಶಗಳಲ್ಲಿದ್ದರೂ ಸ್ವಂತ ಸೂರು ಹೊಂದಿರದ ಮಧ್ಯಮ ವರ್ಗದ ಕುಟುಂಬಗಳಿಗಾಗಿ ನಮ್ಮ ಸರ್ಕಾರವು ಶೀಘ್ರವೇ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ )ಯನ್ನು ಜೂನ್ 25, 2015ರಲ್ಲಿ ಪ್ರಧಾನಿ ಮೋದಿ ಜಾರಿಗೆ ತಂದಿದ್ದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ)ವನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ.
ಸಚಿವಾಲಯದ ಪ್ರಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಈ ವರ್ಷದ ಜುಲೈ 31ರವರೆಗೆ 1.8 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ 76.02 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.