ಹೊಸದಿಲ್ಲಿ: ಮಥುರಾದ ಕೃಷ್ಣಜನ್ಮ ಭೂಮಿ ಬಳಿ ರೈಲ್ವೆ ಇಲಾಖೆ ನಡೆಸುತ್ತಿರುವ ಧ್ವಂಸ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 16ರಂದು ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಅರ್ಜಿದಾರರಿಗೆ ಆಗಸ್ಟ್ 16 ರಂದು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದೆ.
ಹಿರಿಯ ವಕೀಲ ಪ್ರಶಾಂತೋ ಚಂದ್ರ ಸೇನ್ ಅವರು ಪೀಠದ ಮುಂದೆ ಮನವಿಯನ್ನು ಪ್ರಸ್ತಾಪಿಸಿದರು. ವಕೀಲರ ಮೇಲೆ ಗುಂಡಿನ ದಾಳಿಯಿಂದಾಗಿ ಉತ್ತರ ಪ್ರದೇಶದ ನ್ಯಾಯಾಲಯಗಳನ್ನು ಮುಚ್ಚಲಾಗಿದೆ ಎಂದು ಉಲ್ಲೇಖಿಸಿ ತುರ್ತು ವಿಚಾರಣೆಯನ್ನು ಕೋರಿದರು.
ಆಗಸ್ಟ್ 9 ರಂದು ರೈಲ್ವೆ ಅಧಿಕಾರಿಗಳು ಕೆಡವಲು ಆರಂಭಿಸಿದರು ಹಾಗೂ 1800 ರ ದಶಕದಿಂದಲೂ ಜನರು ಅಲ್ಲಿ ವಾಸಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಸೇನ್ ಹೇಳಿದರು.
ಆಗಸ್ಟ್ 16 ರಂದು ಸೂಕ್ತ ಪೀಠದ ಮುಂದೆ ಪ್ರಕರಣವನ್ನು ಇಡುವುದಾಗಿ ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಕೀಲರಾದ ರಾಧಾ ತಾರ್ಕರ್ ಮತ್ತು ಆರನ್ ಶಾ ವಾದ ಮಂಡಿಸಿದ್ದರು.
ಮಥುರಾ ರೈಲ್ವೆ ಅಧಿಕಾರಿಗಳ ಕೆಡವುವ ಪ್ರಕ್ರಿಯೆಗೆ ತಡೆಹಿಡಿಯಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರು ಉತ್ತರ ಪ್ರದೇಶದ ಮಥುರಾ ಸಿವಿಲ್ ನ್ಯಾಯಾಲಯದ ಹಿರಿಯ ವಿಭಾಗದ ಮುಂದೆ ಸಿವಿಲ್ ಮೊಕದ್ದಮೆಯನ್ನು ಸಲ್ಲಿಸಿದ್ದರು ಆದರೆ ರೈಲ್ವೇ ಪ್ರಾಧಿಕಾರದ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ಕೋರಿದ್ದರು ಆದರೆ ಈ ಮಧ್ಯೆ ಆಗಸ್ಟ್ 9 2023 ರಂದು ಕೆಡವುವ ಕೆಲಸ ಪ್ರಾರಂಭವಾಯಿತು.