ಚುನಾವಣಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲು ಹೊಸ ವಿಧೇಯಕ ಮಂಡಿಸಲಿರುವ ಕೇಂದ್ರ – Kannada News | Center to introduce new Bill to exclude Chief Justices from selection process of Election Officers National News
ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲು ಕೇಂದ್ರ ಸರ್ಕಾರ ಎಲ್ಲ ಸಿದ್ದತೆಗಳನ್ನು ನಡೆಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಇಂದು ರಾಜ್ಯ ಸಭೆಯಲ್ಲಿ ಮಹತ್ವದ ವಿಧೇಯಕವನ್ನು ಮಂಡಿಸಲಿದೆ.
ಸಾಂದರ್ಭಿಕ ಚಿತ್ರ
ದೆಹಲಿ, ಆ.10 : ಇನ್ನು ಮುಂದೆ ದೇಶದ ಮುಖ್ಯ ಚುನಾವಣಾ ಆಯುಕ್ತರನ್ನು (Election Commission of India) ನೇಮಿಸುವ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ತಲೆ ಹಾಕುವಂತಿಲ್ಲ. ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲು ಕೇಂದ್ರ ಸರ್ಕಾರ ಎಲ್ಲ ಸಿದ್ದತೆಗಳನ್ನು ನಡೆಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಇಂದು ರಾಜ್ಯ ಸಭೆಯಲ್ಲಿ ಮಹತ್ವದ ವಿಧೇಯಕವನ್ನು ಮಂಡಿಸಲಿದೆ. ಈ ಹಿಂದೆ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಲೋಕಸಭೆ ವಿರೋಧ ಪಕ್ಷದ ನಾಯಕರು, ಮುಖ್ಯ ನ್ಯಾಯಮೂರ್ತಿ ಇರುತ್ತಿದ್ದರು. ಆದರೆ ಇನ್ನು ಮುಂದೆ ಈ ಸಮಿತಿಯಲ್ಲಿ ಪ್ರಧಾನ ಮಂತ್ರಿ ಮತ್ತು ಲೋಕಸಭೆ ವಿರೋಧ ಪಕ್ಷ ನಾಯಕ ಜತೆಗೆ ಪ್ರಧಾನಮಂತ್ರಿಗಳು ಸೂಚಿಸಿದ ಕೆಲವೊಂದು ಸಚಿವರು ಇರುತ್ತಾರೆ. ಸಮಿತಿ ಆಯ್ಕೆ ಮಾಡಿದ ಅಧಿಕಾರಿಯನ್ನು ಮುಖ್ಯ ಚುನಾವಣಾ ಆಯುಕ್ತರಾಗಿ ಆಯ್ಕೆ ಮಾಡಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ.
ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಯ ಬಗ್ಗೆ ಈ ಹಿಂದೆ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಹಲವು ಬಾರಿ ಸಂಘರ್ಷ ಏರ್ಪಟ್ಟಿದ್ದು. ಈ ಸಂಘರ್ಷವನ್ನು ಅಂತ್ಯ ಕಾಣಿಸಲು ಕೇಂದ್ರ ಸರ್ಕಾರ ನ್ಯಾಯಾಂಗವನ್ನು ಈ ಆಯ್ಕೆ ಸಮಿತಿಯಿಂದ ದೂರು ಇಡಲು ನಿರ್ಧಾರಿಸಿದೆ. ದೇಶದ ಉನ್ನತ ಚುನಾವಣಾ ಅಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ಹಸ್ತಕ್ಷೇಪ ಮಾಡಬಾರದು ಎಂದು ಇಂದು ರಾಜ್ಯಸಭೆಯಲ್ಲಿ ವಿಧೇಯಕವನ್ನು ಮಂಡಿಸಲಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವೆಗಳ ಷರತ್ತುಗಳು ಮತ್ತು ಅಧಿಕಾರದ ಅವಧಿ) ನೇಮಕಾತಿಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳನ್ನು ಒಳಗೊಂಡಿರುವ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ ಎಂಬುದನ್ನು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ಸಮಿತಿಯಲ್ಲಿ ಮುಖ್ಯವಾಗಿ ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಸಂಪುಟ ಸಚಿವರು ಇರುತ್ತಾರೆ. ಪ್ರಧಾನಿ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಇನ್ನು ಕೇಂದ್ರ ಮತ್ತು ಸುಪ್ರೀಂ ಕೋರ್ಟ್ ನಡುವೆ ನ್ಯಾಯಾಧೀಶರ ನೇಮಕಾತಿಯಿಂದ ಹಿಡಿದು ದೆಹಲಿ ಸೇವಾ ಕಾಯ್ದೆಯಂತಹ ವಿವಾದಾತ್ಮಕ ಕಾನೂನುಗಳ ವಿಚಾರವಾಗಿ ಸಂಘರ್ಷ ನಡೆಯುತ್ತಲೇ ಇತ್ತು. ಇದೀಗ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಬಗ್ಗೆ ಕೇಂದ್ರ ಮತ್ತು ಸುಪ್ರೀಂ ನಡುವೆ ಹೊಸ ವಿವಾದ ಸೃಷ್ಟಿಯಾಗಿದೆ.
ಈ ಹಿಂದೆ ದೆಹಲಿಯ ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ದೆಹಲಿ ಸರ್ಕಾರ ನಿಯಂತ್ರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಕೇಂದ್ರವು ಇದನ್ನು ಮರುಪರಿಶೀಲನೆಗೆ ಕೋರಿ ದೆಹಲಿಯ ಮೇಲೆ ಕೇಂದ್ರ ನಿಯಂತ್ರಣವನ್ನು ಮತ್ತೆ ಸ್ಥಾಪಿಸಲು ಸುಗ್ರೀವಾಜ್ಞೆಯನ್ನು ತಂದಿತು. ಈ ಮೂಲಕ ಉಭಯ ಸದನದಲ್ಲಿ ದೆಹಲಿ ಸೇವಾ ಮಸೂದೆಯನ್ನು ಅಂಗೀಕಾರಗೊಳಿಸಿತ್ತು. ಇನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ವಿಚಾರಕ್ಕೆ ಬಂದರೆ, ಕೇಂದ್ರ ಮತ್ತು ಸುಪ್ರೀಂ ನಡುವೆ ದೀರ್ಘಕಾಲದವರೆಗೆ ಒಳಜಗಳಗಳು ಉಂಟಾಗಿ ದೊಡ್ಡ ವಿವಾದ ಸೃಷ್ಟಿಸಿತ್ತು. ಕೊನೆಗೆ ಎರಡು ಕಡೆ ಸಮನ್ವಯ ಸಾಧಿಸಿ, ಆಯ್ಕೆ ಪ್ರಕ್ರಿಯೆ ನಡೆಸಿತ್ತು. ಚುನಾವಣಾ ಆಯುಕ್ತರ ನೇಮಕಾತಿಯಲ್ಲೂ ಮತ್ತೆ ಅದೇ ತಕರಾರು, ಈ ಹಿಂದೆ ಸುಪ್ರೀಂ ಕೋರ್ಟ್ ಅತುರದ ಆಯ್ಕೆ ಬೇಡ ಎಂದು ಕೇಂದ್ರಕ್ಕೆ ಖಡಕ್ ಆದೇಶವನ್ನು ನೀಡಿತ್ತು. ಸುಪ್ರೀಂ ಕೇಂದ್ರದ ಎಲ್ಲ ವಿಚಾರಕ್ಕೂ ಹಸ್ತಕ್ಷೇಪ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಇದೀಗ ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಹಸ್ತಕ್ಷೇಪ ಮಾಡಬಾರದು ಎಂದು ಹೊಸ ವಿಧೇಯಕವನ್ನು ರಾಜ್ಯ ಸಭೆಯಲ್ಲಿ ಮಂಡಿಸಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 1:18 pm, Thu, 10 August 23