ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶದ ನಂತರ ನುಹ್‌ನಲ್ಲಿ ಬುಲ್ಡೋಜರ್ ಕ್ರಮ ಸ್ಥಗಿತ – Kannada News | Demolition exercise in Nuh in the wake of communal clashes halted after Punjab and Haryana High Court
ಬುಲ್ಡೋಜರ್ ಕ್ರಮ ತೆಗೆದುಕೊಂಡಿರುವ ಜಿಲ್ಲಾಡಳಿತ ಕಳೆದ ನಾಲ್ಕು ದಿನಗಳಲ್ಲಿ 350 ಗುಡಿಸಲುಗಳು ಮತ್ತು 50 ಕಟ್ಟಡಗಳನ್ನು ಧ್ವಂಸ ಮಾಡಿದೆ. ಧ್ವಂಸ ಕಾರ್ಯಾಚರಣೆಯು ಟೀಕೆಗೆ ಒಳಗಾಗಿತ್ತು. ಇದು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ರಾಜಕಾರಣಿಗಳು ಆರೋಪಿಸಿದ್ದರು. ಅಲ್ಲದೆ, ಮನೆಗಳನ್ನು ಧ್ವಂಸಗೊಳಿಸಿರುವ ಅನೇಕರು ತಮಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ನುಹ್‌ನಲ್ಲಿ ಬುಲ್ಡೋಜರ್ ಕ್ರಮ
ದೆಹಲಿ ಆಗಸ್ಟ್ 07: ಕೋಮು ಘರ್ಷಣೆ (Communal clashes) ಹಿನ್ನೆಲೆಯಲ್ಲಿ ಹರ್ಯಾಣದ ನುಹ್‌ನಲ್ಲಿ (Nuh) ನಡೆಯುತ್ತಿದ್ದ ಧ್ವಂಸ ಕಾರ್ಯವನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ (Punjab and Haryana High Court) ಆದೇಶದ ಮೇರೆಗೆ ಇಂದು (ಸೋಮವಾರ) ಸ್ಥಗಿತಗೊಳಿಸಲಾಗಿದೆ.ಹೈಕೋರ್ಟ್ ತೀರ್ಪಿನ ನಂತರ ಬುಲ್ಡೋಜರ್ ಕ್ರಮವನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಧೀರೇಂದ್ರ ಖಡ್ಗಟಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಹರ್ಯಾಣದಲ್ಲಿ ಕೋಮು ಘರ್ಷಣೆಯಲ್ಲಿ 6 ಮಂದಿ ಸಾವಿಗೀಡಾದ ಒಂದು ವಾರದ ನಂತರ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡಿದೆ. ಈ ಹಿಂಸಾಚಾರ ಗುರುಗ್ರಾಮಕ್ಕೂ ಹಬ್ಬಿತ್ತು.
ಬುಲ್ಡೋಜರ್ ಕ್ರಮ ತೆಗೆದುಕೊಂಡಿರುವ ಜಿಲ್ಲಾಡಳಿತ ಕಳೆದ ನಾಲ್ಕು ದಿನಗಳಲ್ಲಿ 350 ಗುಡಿಸಲುಗಳು ಮತ್ತು 50 ಕಟ್ಟಡಗಳನ್ನು ಧ್ವಂಸ ಮಾಡಿದೆ.
ಧ್ವಂಸ ಕಾರ್ಯಾಚರಣೆಯು ಟೀಕೆಗೆ ಒಳಗಾಗಿತ್ತು. ಇದು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ರಾಜಕಾರಣಿಗಳು ಆರೋಪಿಸಿದ್ದರು. ಅಲ್ಲದೆ, ಮನೆಗಳನ್ನು ಧ್ವಂಸಗೊಳಿಸಿರುವ ಅನೇಕರು ತಮಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಆದಾಗ್ಯೂ, ಸ್ಥಳೀಯ ಆಡಳಿತವು ಅಕ್ರಮ ನಿರ್ಮಾಣಗಳು ಮತ್ತು ಅತಿಕ್ರಮಣಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದೆ. ಅಕ್ರಮ ನಿರ್ಮಾಣದ ವಿರುದ್ಧ ಕೆಡವುವ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ಅದು ಮುಂದುವರಿಯುತ್ತದೆ. ಯಾರನ್ನೂ ಗುರಿಯಾಗಿಸಲು ಕ್ರಮ ತೆಗೆದುಕೊಳ್ಳುತ್ತಿಲ್ಲ. ನಮ್ಮ ಉದ್ದೇಶ ಶಾಂತಿ ಸ್ಥಾಪಿಸುವುದಾಗಿದೆ ಎಂದು ಖಡ್ಗಟಾ ಭಾನುವಾರ ಹೇಳಿದ್ದಾರೆ.
ಹೈದರಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜಿಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಧ್ವಂಸ ಕಾರ್ಯಾಚರಣೆಯ ಬಗ್ಗೆ ಹರ್ಯಾಣದ ಮನೋಹರ್ ಲಾಲ್ ಖಟ್ಟರ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಶಿಕ್ಷೆಯನ್ನು ನೀಡಲು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಒಂದು ಸಮುದಾಯದ (ಮುಸ್ಲಿಮರು) ಕಟ್ಟಡಗಳು, ಮನೆಗಳು ಮತ್ತು ಮೆಡಿಕಲ್ ಶಾಪ್‌ಗಳು ಮತ್ತು ಗುಡಿಸಲುಗಳನ್ನು ಕೆಡವಬೇಕು. ಖಟ್ಟರ್ ಸರ್ಕಾರವು ನ್ಯಾಯಾಲಯದ ಹಕ್ಕುಗಳನ್ನು ಕಸಿದುಕೊಂಡಿದ್ದು, ಸೈದ್ಧಾಂತಿಕವಾಗಿ ಬಿಜೆಪಿ/ಸಂಘಕ್ಕೆ ಹತ್ತಿರವಾಗಿರುವವರಿಗೆ ನ್ಯಾಯ ನೀಡುತ್ತದೆ ಎಂದು ಓವೈಸಿ ಹೇಳಿದ್ದಾರೆ.
ನುಹ್ ಜಿಲ್ಲೆಗೆ ಪ್ರವೇಶಿಸದಂತೆ ಸಿಪಿಐನ ನಾಲ್ಕು ಸದಸ್ಯರ ನಿಯೋಗವನ್ನು ಜಿಲ್ಲಾಡಳಿತ ತಡೆದಿದೆ. ಏತನ್ಮಧ್ಯೆ, ಸಿಪಿಐ ಮುಖಂಡರು ಮತ್ತು ಪೊಲೀಸರ ನಡುವಿನ ವಾಗ್ವಾದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಪಿಐ ಸಂಸದ ಬಿನೋಯ್ ವಿಶ್ವಂ ಮಾತನಾಡಿ, ಇದು ಇಂದಿನ ದೇಶದ ದುಸ್ಥಿತಿ. ಇಂದಿನ ವಾಸ್ತವವೆಂದರೆ ಪೊಲೀಸರು ನಮಗೂ ಅವಕಾಶ ನೀಡುತ್ತಿಲ್ಲ. ಅಂದರೆ ಈ ನಿಯಮದ ಅಡಿಯಲ್ಲಿ, ಸಂಚರಿಸುವ ಸ್ವಾತಂತ್ರ್ಯವನ್ನು ಸಹ ನಿಷೇಧಿಸಲಾಗಿದೆ. ಗೂಂಡಾಗಳು ಮತ್ತು ಫ್ಯಾಸಿಸ್ಟರು ಮುಕ್ತವಾಗಿ ಚಲಿಸಬಹುದು ಎಂದು ಅವರು ಹೇಳಿದರು.
ಕೋಮುಗಲಭೆ ಪೀಡಿತ ಪ್ರದೇಶಗಳಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಈ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದ್ದು ಅರೆಸೇನಾ ಪಡೆಗಳು ಭದ್ರತೆ ಒದಿಗಿಸಿವೆ. ಇಂದು ಬೆಳಗ್ಗೆ ನಾಲ್ಕು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದ್ದು, ಈ ವೇಳೆ ಎಟಿಎಂಗಳನ್ನೂ ತೆರೆಯಲಾಗಿತ್ತು. ಈ ಪ್ರದೇಶದಲ್ಲಿ ಇಂಟರ್ನೆಟ್ ನಿಷೇಧವು ಜಾರಿಯಲ್ಲಿದೆ. ಘರ್ಷಣೆಗೆ ಸಂಬಂಧಿಸಿದಂತೆ 150 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.56 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನುಹ್ ಪೊಲೀಸರು ತಿಳಿಸಿದ್ದಾರೆ.