EBM News Kannada
Leading News Portal in Kannada

My India My Life Goal: ಒಂದು ಕೋಟಿಗಳಿಗಿಂತಲೂ ಹೆಚ್ಚು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದ ‘ಟ್ರೀ ಮ್ಯಾನ್’ ರಾಮಯ್ಯ – Kannada News | Ramaiah is a ‘tree man’ who contributed to environmental protection by planting more than one crore saplings National News

0


ಮಾನವನ ಉಳಿವಿಗಾಗಿ ಪ್ರಕೃತಿ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಇಡೀ ಮಾನವ ಕುಲವೇ ಪ್ರಕೃತಿಯ ಮೇಲೆ ದಬ್ಬಾಳಿಕೆ ಮಾಡುತ್ತಿರುವಾಗ ಕೆಲವೇ ಕೆಲವರು ಆ ಪ್ರಕೃತಿಯನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅಂತಹವರಲ್ಲಿ ಟ್ರೀ ಮ್ಯಾನ್ ರಾಮಯ್ಯ ಅವರು ಕೂಡಾ ಒಬ್ಬರು. ಇವರ ಪರಿಸರ ಸಂರಕ್ಷಣೆಯ ಅಭಿಯಾನ ನಮಗೆಲ್ಲರಿಗೂ ಮಾದರಿ.

ಟ್ರೀ ಮ್ಯಾನ್ ರಾಮಯ್ಯ

ಸಕಲ ಜೀವರಾಶಿಗಳಿಗೂ ಆಧಾರಸ್ತಂಭ ಪರಿಸರ. ನಾವು ಪರಿಸರವನ್ನು ರಕ್ಷಿಸಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಯು ಈ ಭೂಮಿಯ ಮೇಲೆ ಜೀವಿಲು ಸಾಧ್ಯ. ಅದರಲ್ಲೂ ಇಂದಿನ ದಿನಗಳಲ್ಲಿ ಮಾನವನ ಸ್ವಾರ್ಥದಿಂದಾಗಿ ಪರಿಸರವು ವಿನಾಶದತ್ತ ಸಾಗುತ್ತಿದೆ. ನಮ್ಮ ಸ್ವಾರ್ಥದಿಂದಾಗಿ ಪ್ರಕೃತಿಯಲ್ಲಿ ಅದೆಷ್ಟೋ ಜೀವರಾಶಿಗಳು ಅಳಿವಿನಂಚಿನಲ್ಲಿವೆ. ಹಾಗಾಗಿ ಪರಿಸರ ಸಂರಕ್ಷಣೆಗಾಗಿ ದೇಶ ವಿದೇಶಗಳಲ್ಲಿ ಸರ್ಕಾರ, ಸಂಘಟನೆಗಳು ಹಲವಾರು ಅಭಿಯಾನಗಳನ್ನು ಜಾರಿಗೆ ತಂದಿವೆ. ಅದೇ ರೀತಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರವು ಮೈ ಇಂಡಿಯಾ ಮೈ ಲೈಫ್ ಗೋಲ್ ಎಂಬ ಅಭಿಯಾನವನ್ನು ರೂಪಿಸಿದೆ. ಈ ಅಭಿಯಾನದಲ್ಲಿ ಟಿವಿ9 ಕೂಡ ತನ್ನ ಸಹಭಾಗಿತ್ವವನ್ನು ಹೊಂದಿದೆ. ಈ ಮೂಲಕ ನಿಮ್ಮ ಕೈಲಾದಷ್ಟು ಮರಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಅಭಿಯಾನದಲ್ಲಿ ಭಾಗಿಯಾಗಿ ಎಂದು ಕೇಳಿಕೊಳ್ಳುತ್ತೇವೆ.

ನಾವು ಚಿಕ್ಕಂದಿನಿಂದಲೂ ಮಾನವನ ಉಳಿವಿಗಾಗಿ ಪರಿಸರವನ್ನು ರಕ್ಷಿಸಲು ಸಹಾಯ ಮಾಡೋಣ ಎಂಬ ಮಾತುಗಳನ್ನು ಕೇಳುತ್ತಾ ಬರುತ್ತಿದೇವೆ. ಆದರೆ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಪರಿಸರ ಸಂರಕ್ಷಣೆಗೆ ನಾವೆಷ್ಟು ಕೊಡುಗೆ ನೀಡಿದ್ದೇವೆ ಎಂದು? ಎಳ್ಳಿನಷ್ಟು ಪರಿಸರ ಸಂರಕ್ಷಣೆಗೆ ಸಹಾಯವಾಗದ ಜನರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಒಂದು ಕೋಟಿಗೂ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರವನ್ನು ರಕ್ಷಿಸುವಂತಹ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಬೇರೆ ಯಾರು ಅಲ್ಲ, ಟ್ರೀ ಮ್ಯಾನ್ ಅಂತಾನೇ ಪ್ರಖ್ಯಾತಿ ಹೊಂದಿರುವ ತೆಲಂಗಾಣದ ರಾಮಯ್ಯ. ಪ್ರಸ್ತುತ 86 ವರ್ಷ ವಯಸ್ಸಿನ ರಾಮಯ್ಯ ಇಲ್ಲಿಯವರೆಗೆ ಕೋಟಿಗಟ್ಟಲೆ ಸಸಿಗಳನ್ನು ನೆಟ್ಟು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ.

ತೆಲಂಗಾಣದ ಖಮ್ಮಂ ಜಿಲ್ಲೆಯ ರೆಡ್ಡಿಪಲ್ಲಿಯ ದಾರಿಪಲ್ಲಿ ರಾಮಯ್ಯ ತಮ್ಮ ಈ ಇಳಿ ವಯಸ್ಸಿನಲ್ಲೂ ಗಿಡಗಳನ್ನು ಸೈಕಲ್ ಮೇಲೆ ಹೊತ್ತು ತಂದು ನೆಡುತ್ತಾರೆ. ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗುವಾಗ ಗಿಡಗಳು ಮತ್ತು ಬೀಜಗಳನ್ನು ತೆಗೆದುಕೊಂಡು ಹೋಗಿ ಖಾಲಿ ಸ್ಥಳಗಳಲ್ಲಿ ಅವುಗಳನ್ನು ಬಿತ್ತುತ್ತಾರೆ. ಅಲ್ಲದೆ ಮರಗಳ ಬೀಜಗಳನ್ನು ಬೇಸಿಗೆಯಲ್ಲಿ ಸಂಗ್ರಹಿಸಿ ಮಳೆಗಾಲದಲ್ಲಿ ಅವುಗಳನ್ನು ಬಿತ್ತುತ್ತಾರೆ. ಪರಿಸರ ಪ್ರೇಮಿ ರಾಮಯ್ಯನವರ ದಿನಚರಿ ಶುರುವಾಗುವುದು ಸಸಿಗಳನ್ನು ನೆಡುವ ಮೂಲಕ. ಸಸಿಗಳನ್ನು ನೆಡುವುದು ಮಾತ್ರವಲ್ಲದೆ ಅವುಗಳಿಗೆ ಪ್ರತಿನಿತ್ಯ ನೀರು ಹಾಕುತ್ತಾ ಅವುಗಳನ್ನು ಪೋಷಿಸುತ್ತಾರೆ. ಯಾರೇ ಕಾಣಿಸಿಕೊಂಡರೂ ಸಸಿ ನೆಟ್ಟರೆ ಮಾತ್ರ ಮಾನವನ ಉಳಿವು, ಇಲ್ಲದಿದ್ದರೆ ಭವಿಷ್ಯ ಕತ್ತಲು.. ಹಾಗಾಗಿ ಸಸಿಗಳನ್ನು ನೆಟ್ಟು ವೃಕ್ಷ ರಕ್ಷಣೆ ಮಾಡಿ ಎಂದು ಹೇಳುತ್ತಿರುತ್ತಾರೆ.

ಒಂದು ಸಮಯದಲ್ಲಿ ಇವರ ಗಿಡ ನೆಡುವ ಸತ್ಕಾರ್ಯಕ್ಕೆ ಹಣ ಸಾಲದಿದ್ದಾಗ, ತನ್ನ ಮೂರು ಎಕರೆ ಜಮೀನನ್ನು ಮಾರಿ ಅದರಿಂದ ಬಂದಂತಹ ಹಣದಿಂದ ಗಿಡ ನೆಡುವ ಕಾರ್ಯವನ್ನು ಮುಂದುವರೆಸುತ್ತಾರೆ. ರಾಮಯ್ಯ ಅವರು ಓದಿದ್ದು 5 ನೇ ತರಗತಿಯವೆಗೆ ಮಾತ್ರ. ಅಂದು ಅವರ ಶಾಲೆಯಲ್ಲಿ ಶಿಕ್ಷಕರೊಬ್ಬರು ಗಿಡ ನೆಡುವ ಪ್ರಾಮುಖ್ಯತೆಯ ಬಗ್ಗೆ ಪಾಠ ಮಾಡುತ್ತಾರೆ. ಇದು ರಾಮಯ್ಯ ಅವರ ಮೇಲೆ ಗಾಢವಾದ ಪ್ರಭಾವ ಬೀರಿ ಇಂದು ಒಂದು ಕೋಟಿಗಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಟ್ರೀ ಮ್ಯಾನ್ ಎಂಬ ಬಿರುದನ್ನು ಗಳಿಸಿದ್ದಾರೆ.

ಪರಿಸರವಾದಿ ರಾಮಯ್ಯ ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ. ಅಲ್ಲದೆ ರಾಮಯ್ಯನವರ ಈ ಸೇವೆಗಾಗಿ ತೆಲಂಗಾಣ ಸರ್ಕಾರವು ರಾಮಯ್ಯನವರ ಜೀವನ ಚರಿತ್ರೆಯನ್ನು ಪಠ್ಯಕ್ರಮದಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Leave A Reply

Your email address will not be published.