ಬೆಂಗಳೂರು, ಜೂ. 06: ಕಳೆದ ಮೂರು ತಿಂಗಳಿನಿಂದ ಇಡೀ ಜಗತ್ತು ಕೊರೊನಾ ವೈರಸ್ ಆತಂಕವನ್ನು ಎದುರಿಸುತ್ತಿದೆ. ಕೊರೊನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ಇಡೀ ದೇಶಾದ್ಯಂತ ಏಕಾಏಕಿ ಲಾಕ್ಡೌನ್ ಜಾರಿ ಮಾಡಿತ್ತು. ಕೋಟ್ಯಂತರ ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದರು. ಜೊತೆಗೆ ನೂರಾರು ಕೂಲಿ ಕಾರ್ಮಿಕರು ಕೊರೊನಾ ಬದಲು ಅನ್ಯ ಕಾರಣಗಳಿಂದಲೇ ಜೀವ ಕಳೆದುಕೊಂಡಿದ್ದಾರೆ.
ಮೂರು ತಿಂಗಳುಗಳ ಲಾಕ್ಡೌನ್ ಬಳಿಕ ಇದೀಗ ಕೇಂದ್ರ ಸರ್ಕಾರ ಕೂಡ ಕೊರೊನಾ ವೈರಸ್ ಜೊತೆಗೆ ನಾವು ಬದುಕಬೇಕು ಎಂಬ ತೀರ್ಮಾನಕ್ಕೆ ಬಂದಿದೆ. ಅದೇ ಹಿನ್ನೆಲೆಯಲ್ಲಿ ಲಾಕ್ಡೌನ್ 5.O ಜಾರಿಯಾಗಿ ಇದೀಗ 6 ದಿನಗಳು ಕಳೆದಿವೆ. ಇಡೀ ದೇಶ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಜ ಸ್ಥಿತಿಗೆ ಬರಲು ಪ್ರಯತ್ನ ಪಡುತ್ತಿದೆ. ಉಡುಪಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೂ ಕೂಡ ಕೊರೊನಾ ವೈರಸ್ ಜೀವನದ ಒಂದು ಭಾಗವಾಗಲಿದೆ ಎಂದಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರಿಗೆ ಇದೀದ ಕೊರೊನಾ ವೈರಸ್ ತಗಲುವ ಭಯ ಆವರಿಸಿದೆ!
ಬೆಂಗಳೂರಿನ ಮಲ್ಲೇಶ್ವರದಲ್ಲಿ ರಾಜ್ಯ ಬಿಜೆಪಿಯ ಕಚೇಯಿದೆ. 5 ಅಂತಸ್ತುಗಳ ಕಟ್ಟಡದಲ್ಲಿ ಕಚೇರಿಯಲ್ಲಿ ಕೆಲಸ ಸಿಬ್ಬಂದಿಯಿಂದ ಹಿಡಿದು ಬಿಜೆಪಿ ರಾಷ್ಟ್ರೀಯ ನಾಯಕರವರೆಗೆ ಎಲ್ಲರೂ ಇರುತ್ತಾರೆ. ನೆಲ ಮಹಡಿಯಲ್ಲಿ ಬಿಜೆಪಿ ನಾಯಕರು, ಕಚೇರಿ ಸಿಬ್ಬಂದಿಗೆ ಅಡುಗೆ ಮನೆ, ಪಾರ್ಕಿಂಗ್ ವ್ಯವಸ್ಥೆಯಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಕಚೇರಿ, ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತ್ಯೇಕ ಕಚೇರಿ, ಸ್ವಾತಗ ವಿಭಾಗವಿದೆ.