ಕೊರೊನಾ ಹರಡುವಿಕೆ ಬಗ್ಗೆ ವಿಜ್ಞಾನಿಗಳಿಂದ ಅಘಾತಕಾರಿ ವಿಷಯ ಬಹಿರಂಗ.
ನವದೆಹಲಿ, ಏಪ್ರಿಲ್ 04: ವಿಶ್ವದಾದ್ಯಂತ 11 ಲಕ್ಷಕ್ಕೂ ಅಧಿಕ ಮಂದಿಗೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ತಗುಲಿದೆ. 59 ಸಾವಿರಕ್ಕೂ ಹೆಚ್ಚು ಜನ ಕೋವಿಡ್-19 ನಿಂದ ಜೀವ ಕಳೆದುಕೊಂಡಿದ್ದಾರೆ. ದಿನೇ ದಿನೇ ಸೋಂಕಿತರ ಪ್ರಮಾಣ ಮತ್ತು ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವಾಗಲೇ ಒಂದು ಆಘಾತಕಾರಿ ಅಂಶ ಬಯಲಾಗಿದೆ.
ಡೆಡ್ಲಿ ಕೊರೊನಾ ವೈರಸ್ ಹರಡುವಿಕೆ ಬಗ್ಗೆ ವಿಜ್ಞಾನಿಗಳು ಆಘಾತಕಾರಿ ವಿಷಯ ಬಹಿರಂಗ ಪಡಿಸಿದ್ದಾರೆ. ಉಸಿರಾಡುವಾಗ ಮತ್ತು ಮಾತನಾಡುವಾಗಲೂ ಕೊರೊನಾ ವೈರಸ್ ಹಬ್ಬುವ ಸಾಧ್ಯತೆ ಇದೆ ಎಂದು ಈಗ ವಿಜ್ಞಾನಿಗಳು ಹೇಳುತ್ತಿದ್ದಾರೆ.
ಉಸಿರಾಟದ ಹನಿಗಳ ಮೂಲಕ ಕೊರೊನಾ ವೈರಸ್ ಹರಡುತ್ತದೆ. ರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಮೂರು ಗಂಟೆಗಳ ಕಾಲ ವೈರಸ್ ಗಾಳಿಯಲ್ಲಿ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಹೇಳಿತ್ತು. ಆದ್ರೀಗ, ಕೋವಿಡ್-19 ಹಬ್ಬಲು ಮಾತು ಅಥವಾ ಉಸಿರಾಡಿದರೂ ಸಾಕು.!
ಮಾತನಾಡುವಾಗ ಮತ್ತು ಉಸಿರಾಡುವಾಗ ಕೊರೊನಾ ವೈರಸ್ ಗಾಳಿಯಲ್ಲಿ ಸುಲಭವಾಗಿ ಹರಡುತ್ತಿದೆ. ಹೀಗಾಗಿ, ಕೋವಿಡ್-19 Airborne ಇರಬಹುದು. ಜನ ಉಸಿರನ್ನು ಹೊರ ಹಾಕಿದಾಗ, ಗಾಳಿಯಲ್ಲಿ ವೈರಸ್ ಗಳು ಸೇರಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಗಾಳಿಯಲ್ಲಿ ಕೊರೊನಾ ವೈರಸ್ ಹಬ್ಬುವ ಕುರಿತು ನಡೆದಿರುವ ಸಂಶೋಧನೆಗಳು ಸೀಮಿತವಾಗಿದ್ದು, ಲಭ್ಯವಿರುವ ಅಧ್ಯಯನಗಳ ಪ್ರಕಾರ, ವೈರಸ್ ಗಳು ಗಾಳಿಯಿಂದ ಹಬ್ಬುತ್ತದೆ ಎಂದು ನ್ಯಾಷನಲ್ ಅಕಾಡೆಮಿಕ್ಸ್ ಆಫ್ ಸೈನ್ಸಸ್, ಎಂಜಿನಿಯರಿಂಗ್ ಅಂಡ್ ಮೆಡಿಸಿನ್ ನ ಮುಖ್ಯಸ್ಥ ಡಾ.ಹಾರ್ವೆ ಫಿನ್ಬರ್ಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.