ಯೋಗದ ಹಾದಿ ಅಸೌಖ್ಯದಿಂದ ಸೌಖ್ಯದೆಡೆಗೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಧಾರ್ಮಿಕ ಗುರುಗಳು, ನುರಿತ ಯೋಗ ಪಟುಗಳು, ಸೆಲಬ್ರಿಟಿಗಳು, ಶ್ರೀಸಾಮಾನ್ಯರು ಉತ್ಸಾಹದೊಂದಿಗೆ ದೇಶ-ವಿದೇಶಗಳಲ್ಲಿ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಗುರುವಾರ ಆಚರಿಸುವ ಮೂಲಕ ಭಾರತದ ಪ್ರಾಚೀನ ಯೋಗ ಪರಂಪರೆಯ ಮಹತ್ವವನ್ನು ಜಗತ್ತಿಗೆ ಸಾರಿದರು.
ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಯೋಗಾಸನ ಮಾಡಿದರು. ಜಗತ್ತಿನಾದ್ಯಂತ ಸುಮಾರು 5 ಸಾವಿರ ಯೋಗ ಕಾರ್ಯಕ್ರಮಗಳು ನಡೆದವು. ಕೇಂದ್ರದ ವಿವಿಧ ಸಚಿವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿ, ”ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯು ಅತ್ಯಲ್ಪ ಅವಧಿಯಲ್ಲಿ ಅಂಗೀಕರಿಸಿದ್ದು ಒಂದು ದಾಖಲೆಯಾಗಿದೆ. ಎಲ್ಲ ದೇಶಗಳೂ ಈ ಪ್ರಸ್ತಾವಕ್ಕೆ ಒಮ್ಮತದ ಅಂಗೀಕಾರ ನೀಡಿದವು. ‘ಅಸೌಖ್ಯದಿಂದ ಸೌಖ್ಯದೆಡೆಗೆ ಸಾರುವ ರಹದಾರಿ’ ಎನಿಸಿರುವ ಯೋಗವು ಇಂದು ಡೆಹ್ರಾಡೂನ್‌ನಿಂದ ಡಬ್ಲಿನ್‌ವರೆಗೆ, ಜಕಾರ್ತದಿಂದ ಜೊಹಾನ್ಸ್‌ಬರ್ಗ್‌ವರೆಗೆ, ಟೋಕಿಯೊದಿಂದ ಟೊರಾಂಟೊವರೆಗೆ, ಶಾಂಘೈನಿಂದ ಷಿಕಾಗೋವರೆಗೆ, ಸ್ಟಾಕ್‌ಹೋಮ್‌ನಿಂದ ಸಾವೋಪೌಲೋವರೆಗೆ, ಹಿಮಾಲಯ ಪರ್ವತ ಶ್ರೇಣಿಯಿಂದ ಮರಭೂಮಿಯವರೆಗೆ ಜನಪ್ರಿಯಗೊಂಡಿದೆ. ಯೋಗವು ಆರೋಗ್ಯ, ಶಾಂತಿ ಮತ್ತು ಸಹೋದರತ್ವದ ಮೂಲಕ ಇಡೀ ವಿಶ್ವವನ್ನೇ ಒಂದುಗೂಡಿಸಿದೆ,” ಎಂದು ಹೇಳಿದರು.
ಪ್ರಧಾನಿ ಹತ್ಯೆಗೆ ನಕ್ಸಲರು ಸಂಚು ಹೂಡಿದ್ದರು ಎಂಬ ಇತ್ತೀಚಿನ ಪೊಲೀಸ್ ವರದಿಗಳ ಹಿನ್ನೆಲೆಯಲ್ಲಿ ಪ್ರಧಾನಿ ಸಮ್ಮುಖದಲ್ಲಿ ನಡೆದ ಕಾರ‍್ಯಕ್ರಮಕ್ಕೆ 3 ಸಾವಿರ ಭದ್ರತಾ ಸಿಬ್ಬಂದಿಯನ್ನು ಹಾಗೂ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಉತ್ತರಾಖಂಡ ಸಿಎಂ ತ್ರಿವೇಂದ್ರ ರಾವತ್, ರಾಜ್ಯಪಾಲ ಕೆ.ಕೆ.ಪಾಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಿಯಾಚಿನ್‌ನಲ್ಲಿ ಯೋಧರ ಜತೆ ಜಗ್ಗಿ ವಾಸುದೇವ್ ಯೋಗ
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಈಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ಸಮ್ಮುಖದಲ್ಲಿ 250ಕ್ಕೂ ಹೆಚ್ಚು ಯೋಧರು ಯೋಗ ದಿನ ಆಚರಿಸಿದರು. ”ರಕ್ತ ಹೆಪ್ಪುಗಟ್ಟಿಸುವಂಥ ಶೀತ ವಾತಾವರಣದಲ್ಲಿ ದೇಶ ಸೇವೆಯೇ ನನ್ನುಸಿರು ಎಂದು ಹಗಲಿರುಳು ದುಡಿಯುವ ಯೋಧರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸ. ಇಂಥ ಯೋಧರೊಟ್ಟಿಗೆ ಯೋಗ ಆಚರಿಸಿದ್ದು ಒಂದು ಸೌಭಾಗ್ಯ,” ಎಂದು ಸದ್ಗುರು ಹೇಳಿದರು. ಬಳಿಕ, ಸೈನಿಕರು ಹಾಗೂ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಯೋಗದಿಂದಾಗುವ ಆರೋಗ್ಯ ಲಾಭಗಳನ್ನು ಪರಿಚಯಿಸಿಕೊಟ್ಟರು. ಬಳಿಕ ಹುತಾತ್ಮ ಯೋಧರ ಸ್ಮರಣಾರ್ಥ ನಿರ್ಮಿಸಿರುವ ಹಾಲ್ ಆಫ್ ಫೇಮ್ ಮೆಮೋರಿಯಲ್‌ಗೆ ಭೇಟಿಕೊಟ್ಟು ಪುಷ್ಪ ನಮನ ಸಲ್ಲಿಸಿದರು.