ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಸೂಚನೆ
ಬೆಂಗಳೂರು: ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳಲಲಿ ಸಿಸಿಟಿವಿ ಕ್ಯಾಮರಾಗಳು, ಸಿಬ್ಬಂದಿಗೆ ಬಯೋ ಮೆಟ್ರಿಕ್ ಹಾಜರಿ ವ್ಯವಸ್ಥೆ ಮತ್ತು ರೋಗಿಗಳ ದಾಖಲಾತಿ ಕೌಂಟರ್ ನ್ನು ಇನ್ನು 75 ದಿನಗಳೊಳಗೆ ಅಳವಡಿಸಬೇಕೆಂದು ನಿರ್ದೇಶಿಸಲಾಗಿದೆ.
ರೋಗಿಗಳು ಮತ್ತು ಅವರ ಪಾಲಕರಿಂದ ಬರುತ್ತಿರುವ ದೂರುಗಳನ್ನು ಆಧರಿಸಿ ಈ ಕ್ರಮಕ್ಕೆ ಮುಂದಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ನಿಗದಿತ ಸಮಯಕ್ಕಿಂತ ಒಂದು ಗಂಟೆ ಕಳೆದರೂ ಕೂಡ ಹಲವು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ್ದ ಸಚಿವ ಡಿಕೆಶಿ.ಸಮಯಕ್ಕೆ ಸರಿಯಾಗಿ ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆಯಲ್ಲಿರುವುದು ಮುಖ್ಯವಾಗುತ್ತದೆ.
ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಇಲ್ಲದಿದ್ದರೆ ರೋಗಿಗಳಿಗೆ ಚಿಕಿತ್ಸೆ ಪಡೆಯಲು, ಆಸ್ಪತ್ರೆಗೆ ದಾಖಲಾಗಲು ಅನನುಕೂಲವಾಗುತ್ತದೆ. ಇದಕ್ಕಾಗಿ ಸಿಬ್ಬಂದಿ ಮತ್ತು ವೈದ್ಯರ ಮೇಲೆ ನಿಗಾವಹಿಸಲು ಬಯೋಮೆಟ್ರಿಕ್ ಹಾಜರಿ ವ್ಯವಸ್ಥೆ, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಆದೇಶ ನೀಡಿದ್ದೇನೆ ಎಂದು ಹೇಳಿದ್ದರು.
ಆದರೆ ಆಸ್ಪತ್ರೆಯ ಅಧಿಕಾರಿಗಳು ಹೇಳುವ ಪ್ರಕಾರ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮತ್ತು ಬಯೋಮೆಟ್ರಿಕ್ ಈಗಾಗಲೇ ಇದ್ದು ಅವುಗಳ ನಿಗಾವಹಿಸುವಿಕೆಯಲ್ಲಿ ಕೊರತೆಯಿದೆ. ಕೆಲವು ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮರಾ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಕೆಟ್ಟುಹೋಗಿದೆ. ಆದರೆ ಎಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆಗಳಿವೆ. ಅವುಗಳ ಸರಿಯಾದ ನಿರ್ವಹಣೆಯಾಗಬೇಕಷ್ಟೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.