ಹೊಸದಿಲ್ಲಿ : ಧೂಮಪಾನ, ಮದ್ಯಪಾನ ಮತ್ತು ಬೊಜ್ಜು ಇವು ದೈಹಿಕ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದು ಈವರೆಗೆ ಗೊತ್ತಿದ್ದ ಅಂಶ. ಆದರೆ ಈ ಗುಂಪಿನಲ್ಲಿ ಈಗ ಒಂಟಿತನವನ್ನೂ ಸೇರಿಸಬೇಕಿದೆ. ಒಂಟಿತನವು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿ ತ್ವರಿತವಾಗಿ ಹೊರಹೊಮ್ಮುತ್ತಿದೆ ಮತ್ತು ಅದು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿಯೂ ಕಟುವಾಸ್ತವವಾಗಿದೆ ಎನ್ನುವುದನ್ನು ಚಂಡಿಗಡದ ಪಿಜಿಐಎಮ್‌ಇಆರ್‌ನ ಮನೋಶಾಸ್ತ್ರ ವಿಭಾಗದ ಸಂಶೋಧಕರು ಕಂಡುಕೊಂಡಿದ್ದಾರೆ. ಒಂಟಿತನವು ದೈಹಿಕ ಆರೋಗ್ಯಕ್ಕೆ ಗಂಭೀರ ಹಾನಿಗೆ ಕಾರಣವಾಗಿರುವುದರಿಂದ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಶೋಧಕರು ಆಗ್ರಹಿಸಿದ್ದಾರೆ.
‘ಇಂಡಿಯನ್ ಜರ್ನಲ್ ಆಫ್ ಸೈಕಾಲಾಜಿಕಲ್ ಮೆಡಿಸಿನ್’ನಲ್ಲಿ ಪ್ರಕಟಗೊಂಡಿರುವ ಪಿಜಿಐ ಅಧ್ಯಯನ ವರದಿಯು, ಗ್ರಾಮೀಣ ಪ್ರದೇಶಗಳ ವಯಸ್ಕರಲ್ಲಿ ಒಂಟಿತನವನ್ನು ತೋರಿಸಿದೆ.
ಅಧ್ಯಯನಕ್ಕೊಳಪಟ್ಟ ಹೆಚ್ಚಿನವರು ಸರಾಸರಿ 67.6 ವರ್ಷ ಪ್ರಾಯದ ಮಹಿಳೆಯರು, ವಿವಾಹಿತರಾಗಿದ್ದರು ಹಾಗೂ ನಾನ್-ನ್ಯೂಕ್ಲಿಯರ್ ಕುಟುಂಬ(ಪುರುಷ ಮತ್ತು ಮಹಿಳೆಯ ನಡುವೆ ವಿವಾಹದ ಸಾಂಪ್ರದಾಯಿಕ ಬಂಧವನ್ನು ಮತ್ತು ಮಕ್ಕಳನ್ನು ಹೊಂದಿರದ ಜೋಡಿಗಳು)ಗಳಿಗೆ ಸೇರಿದವರಾಗಿದ್ದಾರೆ.
ಅಧ್ಯಯನದ ಸಮಯದಲ್ಲಿ ಒಂಟಿಯಾಗಿದ್ದವರು ತಮಗೆ ವಿವಾಹಿತರಿಗಿಂತ ಹೆಚ್ಚಿನ ಒಂಟಿತನ ಕಾಡುತ್ತಿದೆ ಎಂದು ಹೇಳಿಕೊಂಡಿದ್ದರು. ನ್ಯೂಕ್ಲಿಯರ್ ಕುಟುಂಬಗಳು ಮತ್ತು ಮಧ್ಯಮ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಸೇರಿದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಂಟಿತನ ವರದಿಯಾಗಿತ್ತು ಎಂದು ಅಧ್ಯಯನ ತಂಡದ ಪ್ರಮುಖ ಡಾ.ಅಸೀಮ್ ಮೆಹ್ರಾ ಹೇಳಿದ್ದಾರೆ.
ಒಂಟಿತನವು ಹೃದಯ ರಕ್ತನಾಳ ಕಾಯಿಲೆಗಳು, ಅಕಾಲಿಕ ಸಾವು, ಖಿನ್ನತೆ, ಬುದ್ಧಿಮಾಂದ್ಯತೆ, ಆತಂಕ ಇತ್ಯಾದಿಗಳ ರೂಪದಲ್ಲಿ ಹಲವಾರು ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ಅಧ್ಯಯನವು ತೋರಿಸಿದೆ. ಈ ಪರಿಣಾಮಗಳನ್ನು ಧೂಮಪಾನ, ಮದ್ಯಪಾನ ಮತ್ತು ಬೊಜ್ಜಿನ ಪ್ರತಿಕೂಲ ಪರಿಣಾಮಗಳೊಂದಿಗೆ ಹೋಲಿಸಬಹುದಾಗಿದೆ ಎಂದು ಅದು ತಿಳಿಸಿದೆ.
ನಿಯಂತ್ರಿಸದಿದ್ದರೆ ಮಧುಮೇಹಕ್ಕೆ ಕಾರಣವಾಗುವ ಪೂರ್ವ-ಮಧುಮೇಹದಂತೆ ಪರಿಹರಿಸಲ್ಪಡದ ಒಂಟಿತನವು ಕೂಡ ತೀವ್ರ ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಜಡತೆ, ತಲೆನೋವು, ಹಸಿವಿನ ಕೊರತೆ, ಯುವಜನರಲ್ಲಿ ಜಂಕ್ ಫುಡ್‌ನ ಅತಿಯಾದ ಸೇವನೆ, ಸಂದು ನೋವುಗಳು, ದಣಿವು ಮತ್ತು ಬೊಜ್ಜು ಇವು ಒಂಟಿಯಾಗಿದ್ದು ಒತ್ತಡದಲ್ಲಿರುವ ಜನರಲ್ಲಿ ನಾವು ಸಾಮಾನ್ಯವಾಗಿ ಕಾಣುವ ಲಕ್ಷಣಗಳಾಗಿವೆ. ಅವರು ಕೆಲಸ ಮಾಡಲು, ಮನೆಯಿಂದ ಹೊರಹೋಗಲು ಮತ್ತು ಜನರನ್ನು ಭೇಟಿಯಾಗಲು ಉತ್ಸಾಹವನ್ನು ಹೊಂದಿರುವುದಿಲ್ಲ. ಎರಡು ಗಂಟೆಗಳ ಕಾಲ ಸುಮ್ಮನೆ ಕುಳಿತಿರುವುದು ಮತ್ತು ಖಿನ್ನತೆಯಲ್ಲಿರುವುದು ಒಂದು ಸಿಗರೇಟ್ ಸೇವನೆಗೆ ಸಮಾನವಾಗಿದೆ ಮತ್ತು ಆರೋಗ್ಯದ ಮೇಲೆ ಅದೇ ರೀತಿಯ ಪರಿಣಾಮವನ್ನುಂಟು ಮಾಡುತ್ತದೆ ಎಂದು ವರದಿಯ ಸಹಲೇಖಕ ಡಾ.ರಾಹುಲ್ ಚಕ್ರವರ್ತಿ ಹೇಳಿದರು.
ಒಂಟಿತನವನ್ನು ಸಾಮಾನ್ಯವಾಗಿ ಕೇವಲ ಒಂದು ಭಾವನಾತ್ಮಕ ಸ್ಥಿತಿಯನ್ನಾಗಿ ನೋಡಲಾಗುತ್ತದೆ. ಆದರೆ ಅದು ನಮ್ಮ ದೈಹಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ನಿರಂತರವಾಗಿ ಒಂಟಿತನವನ್ನು ಅನುಭವಿಸುವ ವ್ಯಕ್ತಿಗಳು ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯುವಿನಂತಹ ಹೃದಯ ರಕ್ತನಾಳ ಕಾಯಿಲೆಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎನ್ನುವುದನ್ನು ಸಂಶೋಧನೆಯು ತೋರಿಸಿದೆ.
ಏಕೆಂದರೆ ಒಂಟಿತನವು ಶರೀರದಲ್ಲಿ ಒತ್ತಡದ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ ಮತ್ತು ಇದು ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್‌ನ ಮಟ್ಟವನ್ನು ಹೆಚ್ಚಿಸುತ್ತದೆ. ಕ್ರಮೇಣ ಇದು ಹೆಚ್ಚಾದಾಗ ರಕ್ತನಾಳಗಳು ಮತ್ತು ಅಂಗಾಂಗಗಳಿಗೆ ಹಾನಿಗೆ ಕಾರಣವಾಗತ್ತದೆ ಎಂದು ಮೊಹಾಲಿಯ ಫೋರ್ಟಿಸ್ ಹಾಸ್ಪಿಟಲ್‌ನ ಮನಃಶಾಸ್ತ್ರಜ್ಞೆ ಆಂಚಲ್ ಶರ್ಮಾ ತಿಳಿಸಿದರು.