Healthy Oats Recipe: ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಓಟ್ಸ್ ರೆಸಿಪಿ – Kannada News | Make healthy oats recipe for breakfast Lifestyle News
ಉತ್ತಮ ಆಹಾರದೊಂದಿಗೆ ದಿನವನ್ನು ಪ್ರಾರಂಭಿಸಿದರೆ, ನಾವು ದಿನವಿಡೀ ಉತ್ಸಾಹದಿಂದಿರುತ್ತೇವೆ. ಇದೇ ಕಾರಣದಿಂದ ಹೆಚ್ಚಿನ ಜನರು ಬೆಳಗ್ಗೆ ರುಚಿಕರವಾದ ಹಾಗೆಯೇ ಆರೋಗ್ಯಕರವಾದ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಇಂದು ಬೆಳಗಿನ ಉಪಹಾರದ ಆರೋಗ್ಯಕ ಆವೃತ್ತಿಯಾದ ಓಟ್ಸ್ ನಿಂದ ತಯಾರಿಸಲಾಗುವ ಪಾಕವಿಧಾನದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಇದು ರುಚಿಕರ ಮಾತ್ರವಲ್ಲದೆ, ನಿಮ್ಮ ತೂಕ ಇಳಿಕೆಗೂ ಸಹಾಯ ಮಾಡುತ್ತದೆ.
ಸಾಂದರ್ಭಿಕ ಚಿತ್ರ
ಓಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ತೂಕ ಇಳಿಕೆಯ ಪಯಾಣದಲ್ಲಿ ಅನೇಕ ಜನರು ಓಟ್ಸ್ ಸೇವನೆ ಮಾಡುತ್ತಾರೆ. ಆದರಲ್ಲೂ ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಇನ್ಸ್ಟಂಟ್ ಅಥವಾ ಸಂಸ್ಕರಿಸಿದ ಓಟ್ಸ್ ಗಳನ್ನು ತಿನ್ನುತ್ತಾರೆ. ಇಂತಹ ಓಟ್ಸ್ ನಮ್ಮ ಆರೋಗ್ಯವನ್ನು ಹಾಳು ಮಾಡುವಂತಹ ಅನೇಕ ವಿಷಯಗಳನ್ನು ಒಳಗೊಂಡಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ತೂಕವನ್ನು ಇಳಿಸಿಕೊಳ್ಳಲು ಓಟ್ಸ್ ತಿನ್ನಲು ಬಯಸಿದರೆ ಸಂಸ್ಕರಿಸಿದ ಓಟ್ಸ್ ಬದಲಿಗೆ ಕಚ್ಚಾ ಅಂದರೆ ಸಾದ ಓಟ್ಸ್ ಬಳಸಿ ಅದರಿಂದ ರುಚಿಕರವಾಧ ಖಾದ್ಯವನ್ನು ತಯಾರಿಸಿ. ಇದು ತಿನ್ನಲು ರುಚಿಕರವಾದದ್ದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಹಾಗಿದ್ದರೆ ಓಟ್ಸ್ ನಿಂದ ತಯಾರಿಸಲಾಗುವ ರುಚಿಕರವಾದ ಹಾಗೂ ಆರೋಗ್ಯವಕವಾದ ಪಾಕಗಳು ಯಾವುವು ಎಂಬುದನ್ನು ನೋಡೋಣ.
ಓಟ್ಸ್ ನಿಂದ ತಯಾರಿಸಲಾಗುವ ಸುಲಭ ಪಾಕವಿಧಾನಗಳೆಂದರೆ:
ಓಟ್ಸ್ ಉಪ್ಮಾ ಅಥವಾ ಉಪ್ಪಿಟ್ಟು:
ಓಟ್ಸ್ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು:
1 ಕಪ್ ಓಟ್ಸ್
ಅರಶಿನ ಪುಡಿ
ಹಸಿ ಮೆಣಸಿನಕಾಯಿ
ಸಣ್ಣಗೆ ಹೆಚ್ಚಿದ ಈರುಳ್ಳಿ
ಕ್ಯಾರೆಟ್
ಹಸಿ ಬಟಾಣಿ
ಕ್ಯಾಪ್ಸಿಕಂ
ಕರಿಬೇವು
ಉದ್ದಿನಬೇಳೆ
ಎಣ್ಣೆ
ಸಾಸಿವೆ
ನಿಂಬೆ
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಇದನ್ನು ಮಾಡಲು ಬಾಣಲೆಯಲ್ಲಿ 1 ಚಮಚ ಎಣ್ಣೆಯನ್ನು ಹಾಕಿ ಅದು ಕಾದ ಬಳಿಕ ಓಟ್ಸ್, ಅರಶಿನ ಪುಡಿ, ಉಪ್ಪು, ಹಸಿ ಮೆಣಸಿನಕಾಯಿ ಹಾಕಿ ಇವೆಲ್ಲವನ್ನು 4 ರಿಂದ 5 ನಿಮಿಷಗಳ ಕಾಲ ಹುರಿಯಿರಿ ಮತ್ತು ಅದಕ್ಕೆ ಸ್ವಲ್ಪ ನೀರು ಸೇರಿಸಿ ಬೇಯಲು ಬಿಡಿ. ಈಗ ಇನ್ನೊಂದು ಬಾಣಲೆಯಲ್ಲಿ 1 ಚಮಚ ಎಣ್ಣೆಯನ್ನು ಹಾಕಿ ಅದು ಕಾದ ಬಳಿಕ ಸಾಸಿವೆ, ಉದ್ದಿನಬೇಳೆ, ಕರಿಬೇವು, ಅರಶಿನ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಕ್ಯಾರೆಟ್, ಬಟಾಣಿ ಮತ್ತು ಕ್ಯಾಪ್ಸಿಕಂ ಹಾಕಿ ಬೇಯಲು ಬಿಡಿ. ಎಲ್ಲಾ ತರಕಾರಿಗಳು ಬೆಂದ ನಂತರ ಅದಕ್ಕೆ ಮೊದಲೇ ತಯಾರಿಸಿಟ್ಟ ಓಟ್ಸ್ ಸೇರಿಸಿ, ಅದರ ಮೇಲೆ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಓಟ್ಸ್ ಉಪ್ಮಾ ತಿನ್ನಲು ಸಿದ್ಧ.
ಓಟ್ಸ್ ಇಡ್ಲಿ:
ಬೇಕಾಗುವ ಸಾಮಾಗ್ರಿಗಳು:
ಓಟ್ಸ್ ಹಿಟ್ಟು
ಕ್ಯಾರೆಟ್ ತುರಿ
ಮೊಸರು
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಓಟ್ಸ್ ಇಡ್ಲಿ ಮಾಡಲು 1 ಕಪ್ ಓಟ್ಸ್ ಹಿಟ್ಟು ತೆಗೆದುಕೊಂಡು ಅದಕ್ಕೆ ತುರಿದ ಕ್ಯಾರೆಟ್, ಉಪ್ಪು, ಮೊಸರು, 1 ಚಮಚ ಎಣ್ಣೆಯನ್ನು ಸೇರಿಸಿ ಮೃದುವಾದ ಇಡ್ಲಿ ಹಿಟ್ಟನ್ನು ತಯಾರಿಸಿಕೊಳ್ಳಿ. ಈಗ ಇಡ್ಲಿ ಮಾಡುವ ಪಾತ್ರೆಗೆ ಅಥವಾ ಇಡ್ಲಿ ಪಿಂಗಾಣಿಗೆ ಎಣ್ಣೆ ಸವರಿ ಓಟ್ಸ್ ಇಡ್ಲಿ ಹಿಟ್ಟನ್ನು ಅದಕ್ಕೆ ಸುರಿಯಿರಿ. ಇದನ್ನು ಇಡ್ಲಿಯ ಹಾಗೆ ಹಬೆಯಲ್ಲಿ ಬೇಯಿಸಿ ನಂತರ ತೆಂಗಿಕಾಯಿ ಚಟ್ನಿ ಅಥವಾ ಸಾಂಬರ್ ನೊಂದಿಗೆ ಬಡಿಸಿ.
ಮೊಸರು ಮತ್ತು ಓಟ್ಸ್:
ಮೊಸರು ಓಟ್ಸ್ ಮಾಡಲು ಓಟ್ಸ್ ನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅದರ ನೀರನ್ನು ಬಸಿದು, ಓಟ್ಸ್ ನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಅದಕ್ಕೆ ತಾಜಾ ಮೊಸರು ಸೇರಿಸಿ. ಈಗ ನಿಮ್ಮ ರುಚಿಗೆ ತಕ್ಕಂತೆ ಜೇನು ತುಪ್ಪವನ್ನು ಸೇರಿಸಿ ಮತ್ತು ಮಾವು, ಬಾಳೆಹಣ್ಣಿನಂತಹ ಋತುಮಾನದ ಹಣ್ಣುಗಳನ್ನು ಸೇರಿಸಿ. ಅಲ್ಲದೆ ಅದಕ್ಕೆ ನಟ್ಸ್ ಮತ್ತು ಒಣ ಬೀಜಗಳನ್ನು ಹಾಕಿ ಕೂಡಾ ತಿನ್ನಬಹುದು.
ಓಟ್ಸ್ ಪುಡ್ಡಿಂಗ್:
ಓಟ್ಸ್ ಪುಡ್ಡಿಂಗ್ ಮಾಡಲು 1 ಕಪ್ ಓಟ್ಸ್, ಅರ್ಧ ಲೀಟರ್ ಹಾಲು, ನಿಮ್ಮ ಆಯ್ಕೆಯ ಒಣ ಹಣ್ಣುಗಳು ಮತ್ತು ಸಕ್ಕರೆಯನ್ನು ತೆಗೆದುಕೊಳ್ಳಿ. ಪುಡ್ಡಿಂಗ್ ಅಥವಾ ಖೀರ್ ಮಾಡಲು ಮೊದಲು ಓಟ್ಸ್ ನ್ನು ಹುರಿದು ನಂತರ ಹಾಲು ಸೇರಿಸಿ ಅದನ್ನು ಚೆನ್ನಾಗಿ ಬೇಯಿಸಿ, ಓಟ್ಸ್ ಬೆಂದ ನಂತರ ಅದಕ್ಕೆ ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆ ಮತ್ತು ಒಣ ಹಣ್ಣುಗಳನ್ನು ಸೇರಿಸಿ. ನಂತರ ಫ್ರಿಡ್ಜ್ ನಲ್ಲಿಟ್ಟು ತಿನ್ನಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 7:10 pm, Thu, 10 August 23