World Tribal Day 2023: ವಿಶ್ವ ಮೂಲ ನಿವಾಸಿಗಳ ದಿನದ ಆಚರಣೆಯ ಹಿಂದಿನ ಹಿನ್ನೆಲೆ ಏನು? ಇಲ್ಲಿದೆ ವಿವರ – Kannada News | What is the history and significance of the celebration of World Indigenous Peoples Day? Here is details
International Day Of The World’s Indigenous Peoples 2023: ವಿಶ್ವದ ಬುಡಕಟ್ಟು (ಆದಿವಾಸಿ) ಜನರ ಹಕ್ಕುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ವಿಶ್ವ ಬುಡಕಟ್ಟು ಜನರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಯಾವಾಗ ಜಾರಿಗೆ ಬಂತು, ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.
ವಿಶ್ವದಲ್ಲಿನ ಬುಡಕಟ್ಟು ಜನಾಂಗದವರ ಮೂಲಭೂತ ಹಕ್ಕುಗಳು, ಸಾಮಾಜಿಕ, ಆರ್ಥಿಕ ಮತ್ತು ನ್ಯಾಯಾಂಗ ರಕ್ಷಣೆಗಾಗಿ ಪ್ರತಿವರ್ಷ ಆಗಸ್ಟ್ 9 ರಂದು ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಬುಡಕಟ್ಟು ದಿನ ಎಂದೂ ಕರೆಯಲ್ಪಡುವ ಈ ದಿನವು ಪರಿಸರ ಸಂರಕ್ಷಣೆಯಂತಹ ವಿಶ್ವ ಸಮಸ್ಯೆಗಳನ್ನು ಸುಧಾರಿಸಲು ಸ್ಥಳೀಯ ಬುಡಕಟ್ಟು ಜನರ ಸೇವೆಗಳು ಮತ್ತು ಅವರ ಕೊಡುಗೆಗಳನ್ನು ಸಹ ಗುರುತಿಸುತ್ತದೆ. ಮೊದಲ ಬಾರಿಗೆ ಈ ಆಚರಣೆಯನ್ನು ಯಾವಾಗ ಪ್ರಾರಂಭಿಸಲಾಯಿತು, ಈ ಆಚರಣೆಯ ಉದ್ದೇಶವೇನು ಈ ಕುರಿತ ಮಾಹಿತಿ ಇಲ್ಲಿದೆ.
ವಿಶ್ವ ಮೂಲ ಆದಿವಾಸಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ?
ಬುಡಕಟ್ಟು ಸಮುದಾಯಗಳ ಜನರು ಪ್ರಪಂಚದ 90 ಕ್ಕೂ ಹೆಚ್ಚು ದೇಶಗಳಲ್ಲಿ ವಾಸವಿದ್ದಾರೆ. ಪ್ರಪಂಚದಾದ್ಯಂತ ಬುಡಕಟ್ಟು ಸಮುದಾಯಗಳ ಜನಸಂಖ್ಯೆಯು ಸುಮಾರು 370 ಮಿಲಿಯನ್. ಇದರಲ್ಲಿ ಬೇರೆ ಬೇರೆ ಬುಡಕಟ್ಟು ಜನಾಂಗದವರು ತಮ್ಮದೇ ಆದ ನಿರ್ಧಿಷ್ಟ ಭಾಷೆಗಳನ್ನು ಮಾತಾಡುತ್ತಾರೆ. ಹೀಗೆ 7 ಸಾವಿರ ಬುಟ್ಟುಕಟ್ಟು ಜನಾಂಗದ ಬಾಷೆಗಳಿವೆ. ಹೀಗಿದ್ದರೂ ಆದಿವಾಸಿಗಳು ತಮ್ಮ ಅಸ್ತಿತ್ವ, ಸಂಸ್ಕೃತಿ, ಗೌರವವನ್ನು ಉಳಿಸಿಕೊಳ್ಳಲು ಇಂದು ಹರಸಾಹಸ ಪಡಬೇಕಾಗಿದೆ. ವರ್ಣಭೇದ ನೀತಿ ಪಿಡುಗಿನಂತಹ ಹಲವಾರು ಕಾರಣಗಳಿಂದ ಬುಡಕಟ್ಟು ಸಮುದಾಯದ ಜನರು ತಮ್ಮ ಅಸ್ತಿತ್ವ ಮತ್ತು ಗೌರವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ, ಅವರ ಸಂಸ್ಕೃತಿ ಮತ್ತು ಗೌರವವನ್ನು ಉಳಿಸಲು ಪ್ರತಿವರ್ಷ ಆಗಸ್ಟ್ 9 ರಂದು ಅಂತರಾಷ್ಟ್ರೀಯ ಸ್ಥಳೀಯ ಮೂಲ ನಿವಾಸಿಗಳ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಆದಿವಾಸಿಗಳ ದಿನದ ಆಚರಣೆಯ ಇತಿಹಾಸ:
ವಿಶ್ವದ ಹಲವು ಭಾಗಗಳಲ್ಲಿ ನೆಲೆಯಾಗಿರುವ ಆದಿವಾಸಿ ಜನಾಂಗದವರಿಗೆ ರಕ್ಷಣೆ ಒದಗಿಸಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು, ಅವರ ಭಾಷೆಗಳನ್ನು ಸಂರಕ್ಷಿಸಲು ಜಿನೀವಾ ನಗರದಲ್ಲಿ ಆಗಸ್ಟ್ 9, 1994 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು “ಮೊದಲ ಅಂತರಾಷ್ಟ್ರೀಯ ಮೂಲ ನಿವಾಸಿಗಳ ದಿನ” ಸಮ್ಮೇಳನವನ್ನು ಆಯೋಜಿಸಿತು. ವಿಶ್ವಸಂಸ್ಥೆಯ ಪ್ರಕಾರ ಸ್ಥಳೀಯ ಬುಡಕಟ್ಟು ಜನರು ವಿಶ್ವದ ಜನಸಂಖ್ಯೆಯ ಶೇಕಡಾ 5 ಕ್ಕಿಂತ ಕಡಿಮೆ ಇದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಬಡವರಾಗಿದ್ದಾರೆ. ಇವರು 5,000 ವಿಭಿನ್ನ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ವಿಶ್ವ ಸಂಸ್ಥೆಯು ಪ್ರತಿ ವರ್ಷ ಆಗಸ್ಟ್ 9 ರಂದು ವಿಶ್ವ ಮೂಲ ನಿವಾಸಿಗಳ ದಿನವನ್ನು ಆಚರಿಸುತ್ತಿದೆ.
ಮೂಲ ನಿವಾಸಿಗಳ ಆಚರಣೆಯ ಉದ್ದೇಶ:
ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಮಾನವ ಹಕ್ಕುಗಳು ಮತ್ತು ಪರಿಸರ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಸ್ಥಳೀಯ ಬುಡಕಟ್ಟು ಜನರು ಎದುರಿಸುತ್ತಿರುವಂತಹ ಸಮಸ್ಯೆಗಳನ್ನು ಪರಿಹರಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕಾರವನ್ನು ಬಲಪಡಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ.
ಭಾರತದಲ್ಲಿ ಆದಿವಾಸಿಗಳು:
ಭಾರತದಲ್ಲಿ ಸುಮಾರು 500 ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 75 ಆದಿವಾಸಿ ಬುಡಕಟ್ಟು ಗುಂಪುಗಳಿವೆ. ಆ ಗುಂಪುಗಳು ಕಡಿಮೆ ಸಾಕ್ಷರತೆ ಪ್ರಮಾಣ, ಆರ್ಥಿಕವಾಗಿ ಹಿಂದುಳಿದ ಮತ್ತು ಈ ಗುಂಪಿನ ಜನಸಂಖ್ಯೆಯೂ ಕ್ಷೀಣಿಸುತ್ತಿದೆ. ಭಾರತದಲ್ಲಿ ನೆಲೆಯಾಗಿರುವ ಕೆಲವು ಬುಡಕಟ್ಟು ಸಮುದಾಯಗಳೆಂದರೆ,
ಗೊಂಡ ಬುಡಕಟ್ಟು:
ಗೊಂಡ ಬುಡಕಟ್ಟಿನ ಜನರು ಮುಖ್ಯವಾಗಿ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ವಾಸವಿದ್ದಾರೆ. ಅಲ್ಲದೆ ಈ ಬುಡಕಟ್ಟು ಸಮುದಾಯ ಛತ್ತೀಸ್ ಗಢದ ಬಸ್ತಾರ್ ಜಿಲ್ಲೆ, ಮಹರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಒರಿಸ್ಸಾದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತವೆ.
ಭಿಲ್ ಬುಡಕಟ್ಟು:
ಭಾರತದಲ್ಲಿ ಭಿಲ್ ಬುಡಕಟ್ಟು ಜನಾಂಗದವರು ಹೆಚ್ಚಾಗಿ ಉದಯಪುರದ ಸಿರೋಹಿಯ ಅರಾವಳಿ ಶ್ರೇಣಿಗಳಲ್ಲಿ ಮತ್ತು ರಾಜಸ್ಥಾನದ ಡುಂಗರ್ ಪುರ ಮತ್ತು ಬನ್ಸ್ವಾರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ವಾಸವಿದ್ದಾರೆ.
ಸಂತಾಲ್ ಬುಡಕಟ್ಟು:
ಸಂತಾಲ್ ಬುಡಕಟ್ಟು ಜನಾಂಗದವರು ಹೆಚ್ಚಾಗಿ ಕೃಷಿ ಮತ್ತು ಜಾನುವಾರುಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಈ ಬುಡಕಟ್ಟು ಜನಾಂಗ ಪಶ್ಚಿಮ ಬಂಗಾಳದ ಬಂಕುರಾ ಮತ್ತು ಪುರುಲಿಯಾ ಜಿಲ್ಲೆಯಲ್ಲಿ ವಾಸವಿದೆ.
ಗಾರೋ ಬುಡಕಟ್ಟು:
ಗಾರೋ ಬುಡಕಟ್ಟು ಜನಾಂಗದವರು ತಮ್ಮ ಉತ್ಸಾಹಭರಿತ ಜೀವನಶೈಲಿಗೆ ಹೆಸರಾಗಿದ್ದಾರೆ. ಅವರು ಹೆಚ್ಚಾಗಿ ಮೇಘಾಲಯದ ಬೆಟ್ಟಗಳು ಮತ್ತು ಪಶ್ಚಿಮ ಬಂಗಾಳ, ಮತ್ತು ಅಸ್ಸಾಂ ನಲ್ಲಿ ನೆಲೆಯಾಗಿದ್ದಾರೆ.
ಕುರುಂಬ ಬುಡಕಟ್ಟು:
ಕುರುಂಬ ಬುಡಕಟ್ಟು ಕೃಷಿ ಕಾಯಕದಲ್ಲಿ ತೊಡಗಿರುವ ಆದಿವಾಸಿ ಸಮುದಾಯವಾಗಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಇವರು ನೆಲೆಯಾಗಿದ್ದಾರೆ.
ಬೋಡೋ ಬುಡಕಟ್ಟು:
ಬೋಡೋ ಬುಡಕಟ್ಟುಗಳು ಪಶ್ಚಿಮ ಬಂಗಾಳ ಮತ್ತು ನಾಗಾಲ್ಯಂಆಡ್ ಹೊರತು ಪಡಿಸಿದರೆ ಅಸ್ಸಾಂ ನ ಉದಲ್ಗುರಿ ಮತ್ತು ಕೊಕ್ರಜಾರ್ ಜಿಲ್ಲೆಯಲ್ಲಿ ಕಂಡುಬರುತ್ತದೆ.
ಇರುಲಾ ಬುಡಕಟ್ಟು :
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಭಾಗಗಳಲ್ಲಿ ಇರುಲಾಸ್ ಬುಡಕಟ್ಟು ಜನರು ವಾಸವಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: