Aloo-Poha Cutlets: ಸಂಜೆಯ ಸ್ನಾಕ್ಸ್ಗೆ ಆಲೂಗಡ್ಡೆ-ಅವಲಕ್ಕಿ ಕಟ್ಲೆಟ್ ಸೂಪರ್, ಇಲ್ಲಿದೆ ಪಾಕವಿಧಾನ – Kannada News | Make Crispy Aloo Poha Cutlets for Evening Snacks: Here’s the recipe Lifestyle News
ಕಟ್ಲೆಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರವರೆಗೂ ಕಟ್ಲೆಟ್ ಎಲ್ಲರಿಗೂ ಇಷ್ಟ. ಎಲ್ಲರ ಅಚ್ಚುಮೆಚ್ಚಿನ ಹಾಗೂ ಸಂಜೆಯ ಚಹಾ ಕಾಫಿ ಸಮಯದಲ್ಲಿ ಸವಿಯಲು ಸೂಕ್ತವಾದ ಆಲೂ-ಪೋಹಾ ಕಟ್ಲೆಟ್ ಪಾಕವಿಧಾನದ ಬಗ್ಗೆ ನಾವಿಂದು ತಿಳಿಸಿಕೊಡುತ್ತೇವೆ.
ಸಾಂದರ್ಭಿಕ ಚಿತ್ರ
ಅವಲಕ್ಕಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದೇ ಕಾರಣದಿಂದ ಹೆಚ್ಚಿನ ಜನರು ಬೆಳಗ್ಗಿನ ಉಪಹಾರದ ಸಮಯದಲ್ಲಿ ಬಗೆ ಬಗೆಯ ಅವಲಕ್ಕಿ ಉಪಹಾರಗಳನ್ನು ಮಾಡುತ್ತಾರೆ. ಹಾಗೆಯೇ ನೀವು ಸಂಜೆಯ ಕಾಫಿ ಟೀ ಸಮಯದಲ್ಲೂ ಅವಲಕ್ಕಿಯಿಂದ ರುಚಿಕರವಾದ ಖಾದ್ಯ ತಯಾರಿಸಬಹುದು. ಹೌದು ನೀವು ಆಲೂಗಡ್ಡೆ ಮತ್ತು ಅವಲಕ್ಕಿಯನ್ನು ಬಳಸಿಕೊಂಡು ಸುಲಭವಾಗಿ ಕಟ್ಲೆಟ್ ತಯಾರಿಸಬಹುದು. ಇದು ಸಂಜೆಯ ತಿಂಡಿಯ ಆರೋಗ್ಯಕರ ಆವೃತ್ತಿಯಲ್ಲಿ ಒಂದು. ಈ ಕಟ್ಲೆಟ್ ಹೇಗೆ ತಯಾರಿಸುವುದು? ಈ ಪಾಕವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.
ಆಲೂಗಡ್ಡೆ-ಅಲವಕ್ಕಿ ಕಟ್ಲೆಟ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
• ನೆನೆಸಿದ ಅವಲಕ್ಕಿ
• ಬೇಯಿಸಿದ ಆಲೂಗಡ್ಡೆ
• ಸಣ್ಣಗೆ ಹೆಚ್ಚಿದ ಈರುಳ್ಳಿ
• ಹಸಿರು ಮತ್ತು ಹಳದಿ ಕ್ಯಾಪ್ಸಿಕಂ
• ಶುಂಠಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್
• ಅಚ್ಚಖಾರದ ಪುಡಿ
• ಜೀರಿಗೆ ಪುಡಿ
• ಧನಿಯಾ ಪುಡಿ
• ಗರಂ ಮಸಾಲಾ
• ಚಾಟ್ ಮಸಾಲಾ
• ರುಚಿಗೆ ತಕ್ಕಷ್ಟು ಉಪ್ಪು
• ಅಕ್ಕಿ ಹಿಟ್ಟು
• ಹುರಿದ ಕಡಲೆ ಬೀಜದ ತರಿತರಿಯಾದ ಪುಡಿ (ನುಣ್ಣಗೆ ರುಬ್ಬುವುದು ಬೇಡ, ಕಡಲೆ ಪುಡಿ ತರಿತರಿಯಾಗಿರಲಿ)
• ಕೊತ್ತಂಬರಿ ಸೊಪ್ಪು
• ಎಳ್ಳು
• ಎಣ್ಣೆ
ಆಲೂಗಡ್ಡೆ ಅವಲಕ್ಕಿ ಕಟ್ಲೆಟ್ ತಯಾರಿಸುವ ವಿಧಾನ:
ಕಟ್ಲೆಟ್ ಮಾಡಲು ಮೊದಲಿಗೆ ನಿಮಗೆ ಬೇಕಾದ ಪ್ರಮಾಣದಲ್ಲಿ ಅವಲಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿಡಿ. ಚೆನ್ನಾಗಿ ನೆನೆದ ಬಳಿಕ ಅದರ ನೀರನ್ನು ತೆಗೆದು ಆ ಅವಲಕ್ಕಿಯನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಈಗ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಬೇಯಿಸಿಟ್ಟ ಆಲೂಗಡ್ಡೆಯನ್ನು ತುರಿದು ಹಾಕಿ ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಹೆಚ್ಚಿದ ಈರುಳ್ಳಿ, ಹಳದಿ ಹಸಿರು ಕ್ಯಾಪ್ಸಿಕಂ, ಶುಂಠಿ ಮತ್ತು ಹಸಿಮೆಣಸಿಕಾಯಿ ಪೇಸ್ಟ್, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲಾ, ಅಕ್ಕಿ ಹಿಟ್ಟು, ಹುರಿದ ಕಡಲೆಕಾಯಿ ಪುಡಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಇವೆಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ ಈ ಮಿಶ್ರಣದಿಂದ ಸಣ್ಣ ಸಣ್ಣ ಕಟ್ಲೆಟ್ ತಯಾರಿಸಿದ ಬಳಿಕ ಅದರ ಮೇಲೆ ಬಿಳಿ ಎಳ್ಳುಗಳನ್ನು ಹಾಕಿ. ಈ ಎಲ್ಲಾ ಕಟ್ಲೆಟ್ ಗಳನ್ನು ಕಾದ ಎಣ್ಣೆಯಲ್ಲಿ ಫ್ರೈ ಮಾಡಿ.
ಪುದೀನಾ ಚಟ್ನಿ ಅಥವಾ ಸಾಸ್ ನೊಂದಿಗೆ ಈ ಕಟ್ಲೆಟ್ ಸವಿಯಲು ಉತ್ತಮವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: