ಬೆಂಗಳೂರು, ಜೂನ್ 12 : ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಮಾತೇ ಅಂತಿಮ ಎಂಬ ಸುದ್ದಿಗಳು ಹಬ್ಬಿವೆ.
ಒಟ್ಟು 7 ಸದಸ್ಯರನ್ನು ವಿಧಾನಪರಿಷತ್ಗೆ ಆಯ್ಕೆ ಮಾಡಬೇಕು. ಬಿಜೆಪಿ 4 ಸ್ಥಾನಗಳಲ್ಲಿ ಸುಲಭವಾಗಿ ಜಯಗಳಿಸಲಿದೆ. ಇದರ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 5 ಗಣ್ಯರನ್ನು ಪರಿಷತ್ಗೆ ನಾಮ ನಿರ್ದೇಶನ ಮಾಡಲು ಬಿಜೆಪಿಗೆ ಅವಕಾಶ ಸಿಕ್ಕಿದೆ.
ಒಟ್ಟು 9 ಸದಸ್ಯರು ಬಿಜೆಪಿ ಮೂಲಕ ಪರಿಷತ್ ಪ್ರವೇಶ ಮಾಡಲಿದ್ದಾರೆ. ಆದ್ದರಿಂದ, ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ರಾಜ್ಯಸಭೆ ಚುನಾವಣೆಯಲ್ಲಿ ಆದಂತೆ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾಗಿ ಅಚ್ಚರಿಯ ಹೆಸರು ಘೋಷಣೆಯಾಗಲಿದೆಯೇ? ಎಂಬ ಭಯ ಕೂಡ ಟಿಕೆಟ್ ಆಕಾಂಕ್ಷಿಗಳಲ್ಲಿ ಇದೆ.