ಗೌಹಾತಿ, ಜೂನ್ 02 : ದಕ್ಷಿಣ ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ಭೂಕುಸಿತದಿಂದಾಗಿ 20 ಜನರು ಮೃತಪಟ್ಟಿದ್ದಾರೆ. ಮಣ್ಣಿನ ಅಡಿ ಇನ್ನೂ ಹಲವರು ಸಿಕ್ಕಿ ಹಾಕಿಕೊಂಡಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಂಗಳವಾರ ಮಧ್ಯಾಹ್ನ ದಕ್ಷಿಣ ಅಸ್ಸಾಂನ ಮೂರು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ. ಈ ಘಟನೆಯಲ್ಲಿ 20 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ದಕ್ಷಿಣ ಅಸ್ಸಾಂನ ಹಲವು ಪ್ರದೇಶಗಳಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿಯೇ ಭೂ ಕುಸಿತ ಸಂಭವಿಸಿದೆ. ಮೇ 26 ಮತ್ತು 27ರಂದು ಸಹ ಹಲವು ಪ್ರದೇಶದಲ್ಲಿ ಭೂ ಕುಸಿತವಾಗಿತ್ತು.
ದಕ್ಷಿಣ ಅಸ್ಸಾಂನ ಬೇರೆ ಬೇರೆ ಪ್ರದೇಶದಲ್ಲಿ ಈ ಭೂ ಕುಸಿತ ಸಂಭವಿಸಿದೆ. ಚಾಚರ್ ಜಿಲ್ಲೆಯಲ್ಲಿ 7 ಜನರು ಮತ್ತು ಹೈಲಕಂಡಿ ಜಿಲ್ಲೆಯಲ್ಲಿ 7 ಹಾಗೂ ಕರೀಂಗಂಜ್ ಜಿಲ್ಲೆಯಲ್ಲಿ 6 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.