ಬೆಂಗಳೂರಿನಲ್ಲಿ ಕೊರೋನಾಗೆ ಮತ್ತೊಂದು ಬಲಿ: ರಾಜ್ಯದಲ್ಲಿ ಮೃತರ ಸಂಖ್ಯೆ 19ಕ್ಕೇರಿಕೆ
ಬೆಂಗಳೂರು(ಏ.26): ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿದಿದೆ. ಇಂದು ಕೋವಿಡ್-19ಗೆ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪರಿಣಾಮ ಮೃತರ ಸಂಖ್ಯೆಯೂ 19ಕ್ಕೇರಿದೆ. ಕೊರೋನಾಗೆ ಬಲಿಯಾದ ಮಹಿಳೆಗೆ 45 ವರ್ಷ ಎಂದು ಹೇಳಲಾಗುತ್ತಿದೆ.
45 ವರ್ಷದ ಈ ಮಹಿಳೆ ಏಪ್ರಿಲ್ 24ರಿಂದಲೇ ಕೊರೋನಾ ವೈರಸ್ ಕಾರಣದಿಂದಾಗಿ ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಏ.25ರಂದು ಅಂದರೆ ಮರುದಿನವೇ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್ ಮಾಹಿತಿ ನೀಡಿದ್ಧಾರೆ.
ಕರ್ನಾಟಕದಲ್ಲಿ ಮತ್ತೆ ಕೊರೋನಾ ಆರ್ಭಟ ಮುಂದುವರಿದಿದೆ. ಇದುವರೆಗೂ ರಾಜ್ಯದಲ್ಲಿ 501 ಮಂದಿಗೆ ಕೊರೋನಾ ಬಂದಿದೆ. ನಿನ್ನೆಯಿಂದ ಕೇವಲ ಬೆಂಗಳೂರಿನಲ್ಲೇ 14 ಮಂದಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 7 ಮಂದಿಗೆ ಸೋಂಕು ಪತ್ತೆಯಾಗಿದೆ. ಇಂದು ಬೆಂಗಳೂರಿನಲ್ಲಿ ಗರ್ಭಿಣಿ ಮಹಿಳೆ ಸಾವನ್ನಪ್ಪಿದ ಪರಿಣಾಮ ಇದುವರೆಗೂ 19 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಇನ್ನು, 501 ಕೇಸುಗಳ ಪೈಕಿ ಬೆಂಗಳೂರು ನಗರ- 133, ಮೈಸೂರು- 89, ಬೆಳಗಾವಿ- 54, ಬಾಗಲಕೋಟೆ- 24, ಬಳ್ಳಾರಿ- 13, ಬೆಂಗಳೂರು ಗ್ರಾಮಾಂತರ- 12, ಬೀದರ್- 15, ಚಿಕ್ಕಬಳ್ಳಾಪುರ- 18, ದಕ್ಷಿಣ ಕನ್ನಡ- 18, ಚಿತ್ರದುರ್ಗ- 1, ದಾವಣಗೆರೆ- 2, ಧಾರವಾಡ- 9, ಗದಗ- 4, ಕಲಬುರ್ಗಿ- 36, ಕೊಡಗು- 1, ಮಂಡ್ಯ- 16, ತುಮಕೂರು- 3, ಉಡುಪಿ- 3, ಉತ್ತರ ಕನ್ನಡ- 11, ವಿಜಯಪುರದಲ್ಲಿ 39 ಪ್ರಕರಣಗಳು ದಾಖಲಾಗಿವೆ.