ಕೊರೊನಾ ಲಾಕ್‌ಡೌನ್ ನಿಂದ ಸಿಕ್ತಿಲ್ಲ ಕೂಲಿ ಕೆಲಸ; ಮೂರಾಬಟ್ಟೆಯಾದ ಕಾರ್ಮಿಕರ ಬದುಕು
ಚಿಕ್ಕಮಗಳೂರು : ಕೊರೊನಾ ಲಾಕ್‌ಡೌನ್‌ನಿಂದಾಗಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿರುವ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಒಂದು ತಿಂಗಳಿನಿಂದ ಕೆಲಸವಿಲ್ಲದೆ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಶಾಂತಿನಗರ ಗ್ರಾಮದಲ್ಲಿ ನಡೆದಿದೆ.
ಇವರೆಲ್ಲಾ ಕೂಲಿ ಕೆಲಸವನ್ನೆ ನಂಬಿ ಬದುಕು ಸಾಗಿಸುತ್ತಿರೋ ಜನರು. ಕೊರೊನಾ ಎಫೆಕ್ಟ್ ನಿಂದ ಲಾಕ್ ಡೌನ್ ಪರಿಣಾಮ ಕೂಲಿ ನಾಲಿ ಮಾಡಿ ಬದುಕುತ್ತಿದ್ದ ದುಡಿಯುವ ಕೈಗಳಿಗೆ ಇದೀಗ ಕೆಲಸವೇ ಸಿಗದಂತಹ ದುಃಸ್ಥಿತಿ ಎದುರಾಗಿದೆ. ಇದರಿಂದ ಮಕ್ಕಳು, ವೃದ್ಧರು, ದೊಡ್ಡವರೂ ಸಹ ಹಸಿವಿನಿಂದ ಬಳಲುವಂತಾಗಿದೆ.
ಯುವಕರು, ಗಂಡಸರು, ಹೆಂಗಸರು ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಇದೀಗ ಕೂಲಿ ಇಲ್ಲದೇ ಮನೆಯಲ್ಲೇ ಇರುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಒಪ್ಪೊತ್ತಿನ ಊಟಕ್ಕೂ ಈ ಬಡ ಕಾರ್ಮಿಕರು ಪರದಾಟ ನಡೆಸುವಂತಾಗಿದೆ. ಕಾಫಿ ತೋಟವನ್ನೆ ನಂಬಿ ಜೀವನ ಸಾಗಿಸುತ್ತಿದ್ದ ಕಾರ್ಮಿಕರು ಕೆಲಸವೂ ಇಲ್ಲ, ಇತ್ತ ನೆಮ್ಮದಿಯೂ ಇಲ್ಲ ಎಂದು ಕಣ್ಣೀರಿಡುತ್ತಾ ಬದುಕು ದೂಡುತ್ತಿದ್ದಾರೆ.