ರಾಜ್ಯ ಸರ್ಕಾರಿ ನೌಕರರ ವೇತನ ಕಡಿತದ ಪ್ರಸ್ತಾಪಕ್ಕೆ ಸಿಎಂ ಯಡಿಯೂರಪ್ಪ ನಕಾರ?
ಬೆಂಗಳೂರು(ಏ. 24): ಕೊರೋನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ವಿಪರೀತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ, ಸಂಪನ್ಮೂಲ ಕ್ರೋಢೀಕರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದೆ. ಆಡಳಿತಾತ್ಮಕ ವೆಚ್ಚವನ್ನು ಮಿತಿಗೊಳಿಸುವುದು ಸರ್ಕಾರದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರವರ್ಗದ ಸಂಬಳವನ್ನು ಕಡಿಮೆಗೊಳಿಸುವ ಯೋಚನೆಯಲ್ಲಿ ರಾಜ್ಯ ಸರ್ಕಾರ ಇದೆ. ಕೇಂದ್ರ ಸರ್ಕಾರ ಅಥವಾ ಕೇರಳ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ನೌಕರರ ಸಂಬಳ ಕಟ್ ಮಾಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಂತಿಮ ಕ್ಷಣದಲ್ಲಿ ಈ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ಧಾರೆನ್ನಲಾಗಿದೆ.
ಕೇಂದ್ರ ಸರ್ಕಾರ ತನ್ನ ಸಚಿವರು ಮತ್ತು ಸಂಸದರ ಒಂದು ವರ್ಷದ ಸಂಬಳದಲ್ಲಿ ಶೇ. 30ರಷ್ಟು ಕಡಿತ ಮಾಡಿದೆ. ಕೇಂದ್ರ ಸರ್ಕಾರೀ ನೌಕರರ ಡಿಎ, ಡಿಆರ್ ಹೆಚ್ಚಳವನ್ನು ರದ್ದುಗೊಳಿಸಿದೆ. ಇದೇ ಮಾದರಿಯಲ್ಲಿ ರಅಜ್ಯ ಸರ್ಕಾರಿ ನೌಕರರ ಭತ್ಯೆಗಳನ್ನ ಮೂರು ತಿಂಗಳು ಹೊರಹಾಕಲು ಸರ್ಕಾರ ಗಂಭೀರವಾಗಿ ಆಲೋಚಿಸಿತ್ತು.
ಹಾಗೆಯೇ, ಕೇರಳ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ಸಂಬಳವನ್ನು 6 ಕಂತುಗಳಲ್ಲಿ ಕಟ್ ಮಾಡುವ ಪ್ರಸ್ತಾವನೆಯೂ ಇತ್ತು. ನಿನ್ನೆ ಸಿಎಂ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಎಲ್ಲಾ ವಿಚಾರಗಳು ಚರ್ಚೆಯಾಗಿದ್ದವು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕ್ರಮಗಳು ಬೇಡ ಎಂದು ತಿಳಿಸಿದರೆನ್ನಲಾಗಿದೆ.
ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲಿನಲ್ಲಿ 1,678 ಕೋಟಿ ರೂಪಾಯಿ ಬಿಡುಗಡೆಗೊಳಿಸಿದೆ. ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 5,495 ಕೋಟಿ ರೂ ವಿಶೇಷ ಗ್ರಾಂಟ್ ಕೊಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ, ರಾಜ್ಯದ ಆರ್ಥಿಕ ತೊಂದರೆ ಸರಿಹೋಗುತ್ತದೆ. ಸದ್ಯಕ್ಕೆ ಇರುವುದರಲ್ಲೇ ಹೇಗೇ ನಿಭಾಯಿಸಿ. ನೌಕರರ ಸಂಬಳ ಕಡಿತದಂಥ ಕ್ರಮ ಬೇಡ ಎಂದು ಉನ್ನತಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.