EBM News Kannada
Leading News Portal in Kannada

ರಾಮನಗರವನ್ನು ರಕ್ಷಿಸಿ ಇಲ್ಲದಿದ್ದರೆ ಬೀದಿಗಿಳಿಯುವೆ: ಶಾಸಕಿ ಅನಿತಾ ಕುಮಾರಸ್ವಾಮಿ ಎಚ್ಚರಿಕೆ

0

ರಾಮನಗರ (ಏಪ್ರಿಲ್ 24); ಬೆಂಗಳೂರಿನ ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರಿಸುವ ಮೂಲಕ ರಾಜ್ಯ ಸರ್ಕಾರ ಅಕ್ಷಮ್ಯ ಅಪರಾಧವೆಸಗಿದೆ. ಶೀಘ್ರದಲ್ಲಿ ಅವರನ್ನು ಬೇರೆ ಸಾಗಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಾದರಾಯನಪುರ ಗಲಾಟೆಗೆ ಸಂಬಂಧಿಸಿದಂತೆ ಬಂಧಿತ ಎಲ್ಲಾ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಈ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು ಇಡೀ ರಾಮನಗರ ಬೆಚ್ಚಿ ಬಿದ್ದಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅನಿತಾ ಕುಮಾರಸ್ವಾಮಿ,

“ಹೆಚ್‌.ಡಿ. ಕುಮಾರಸ್ವಾಮಿ ಅವರು ಮುಂದಾಗಬಹುದಾದ ಅನಾಹುತದ ಬಗ್ಗೆ ಸರ್ಕಾರಕ್ಕೆ ಮೊದಲೇ ಕಿವಿ ಹಿಂಡಿದ್ದರು. ಜಾಣಕಿವುಡು ಪ್ರದರ್ಶಿಸಿದ ರಾಜ್ಯ ಸರ್ಕಾರ ಕರೋನ ಸೋಂಕನ್ನು ಜಿಲ್ಲೆಗೆ ಹಂಚಿದ್ದು ಸರೀನಾ ? ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ, ಉಪಮುಖ್ಯಮಂತ್ರಿ ಹಾಗೂ ವೈದ್ಯರು ಆಗಿರುವ ಡಾಕ್ಟರ್ ಅಶ್ವಥ್ ನಾರಾಯಣ ಅವರು ಹಾರಿಕೆಯ ಹೇಳಿಕೆಗಳ ನೀಡುವುದು ಬಿಟ್ಟು ಜವಾಬ್ದಾರಿತನದಿಂದ ವರ್ತಿಸಲಿ. ವಾಸ್ತವ ಸ್ಥಿತಿಯನ್ನು ಅರಿತು ಪ್ರತಿಕ್ರಿಯಿ ಸಲಿ. ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಮಾಡುವುದನ್ನು ಬಿಡಲಿ.

ಸರ್ಕಾರದ ಬೇಜವಾಬ್ದಾರಿತನವನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಕ್ಷಣ ರಾಮನಗರದ ಮಾರ್ವಾಡಿ ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಜಿಲ್ಲೆಯಾದ್ಯಂತ ಕರೋನಾ ಸೋಂಕು ಹರಡದಂತೆ ಅಗತ್ಯ ವೈದ್ಯಕೀಯ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಜಿಲ್ಲೆಯ ಜನತೆಯ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹೋರಾಟ ಅನಿವಾರ್ಯ” ಎಂದು ಅನಿತಾ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

Leave A Reply

Your email address will not be published.