EBM News Kannada
Leading News Portal in Kannada

BS Yediyurappa: ಇದು ಜಮೀರ್ ಸರ್ಕಾರವೇನ್ರೀ?: ಮುಖ್ಯಮಂತ್ರಿ, ಗೃಹ ಸಚಿವರು ಆಕ್ರೋಶ

0

ಬೆಂಗಳೂರು(ಏ. 20): ಬಿಬಿಎಂಪಿ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಮಾತು ಕೇಳದೇ ರಾತ್ರಿ ಹೊತ್ತು ಪಾದರಾಯನಪುರಕ್ಕೆ ಹೋಗಿದ್ದು ತಪ್ಪು ಎಂಬರ್ಥದಲ್ಲಿ ಹೇಳಿಕೆ ನೀಡಿರುವ ಜಮೀರ್ ಖಾನ್ ವಿರುದ್ಧ ಆಡಳಿತ ಪಕ್ಷ ತಿರುಗಿಬಿದ್ದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರು ಜಮೀರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾದರಾಯನಪುರಕ್ಕೆ ಜಮೀರ್ ಅವರನ್ನ ಕೇಳಿಕೊಂಡು ಹೋಗಬೇಕೇನ್ರೀ. ಸರ್ಕಾರ ನಮ್ಮದೋ ಅವರದ್ದೋ? ಅವರು ಆರೀ ಕೇಳೋಕೆ. ಅವರಿಗೂ ಇದಕ್ಕೂ ಎನ್ರೀ ಸಂಬಂಧ? ಸರ್ಕಾರ ಮಾಡುವ ಕೆಲಸಕ್ಕೆ ಅವರ ಅಪ್ಪಣೆ ಪಡೆದು ಹೋಗಬೇಕಾ? ಗಲಭೆ ಘಟನೆಯನ್ನು ಅವರು ಸಮರ್ಥಿಸಿಕೊಳ್ಳುತ್ತಿದ್ಧಾರೆ. ಇದು ಅವರ ಬೇಜವಾಬ್ದಾರಿತನ ತೋರಿಸುತ್ತದೆ. ಅವರೇ ಇದಕ್ಕೆಲ್ಲಾ ಪ್ರಚೋದನೆ ಕೊಡುತ್ತಿದ್ದಾರೆ ಎಂದು ಭಾವಿಸಬೇಕಾ ಎಂದು ಸಿಎಂ ಯಡಿಯೂರಪ್ಪ ಪ್ರಶ್ರಿಸಿದ್ದಾರೆ.

ಆರೋಗ್ಯ ಸಿಬ್ಬಂದಿ ತಮ್ಮ ಮಾತು ಕೇಳಿ ಪಾದರಾಯನಪುರಕ್ಕೆ ಹೋಗಬೇಕಿತ್ತು ಎಂದು ಜಮೀರ್ ನೀಡಿದ್ದ ಹೇಳಿಕೆಯನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬಲವಾಗಿ ಖಂಡಿಸಿದ್ಧಾರೆ. ಇದು ಜಮೀರ್ ಅವರ ಸರ್ಕಾರವೇನ್ರೀ ಕೇಳಿಕೊಂಡು ಹೋಗಲು? ಅವರದ್ದು ಬೇಜವಾಬ್ದಾರಿ ನಡವಳಿಕೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಪೊಲೀಸರು ಏನೆಂಬುದನ್ನು ಆ ಜನರಿಗೆ ತೋರಿಸುತ್ತೇವೆ ಎಂದು ಬೊಮ್ಮಾಯಿ ಎಚ್ಚರಿಕೆ ಕೊಟ್ಟಿದ್ದಾರೆ.

ಸಚಿವರಾದ ಜಗದೀಶ್ ಶೆಟ್ಟರ್, ಆರ್ ಅಶೋಕ್, ಸಿಟಿ ರವಿ ಮೊದಲಾದವರು ಪಾದರಾಯನಪುರ ಗಲಭೆ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರೂ ಈ ಘಟನೆಯನ್ನು ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ಧಾರೆ.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಪ್ರತಿಕ್ರಿಯೆ ನೀಡಿದ್ದು, ಜಮೀರ್ ಈ ಘಟನೆ ಹಿಂದೆ ಇದ್ದಾರೆ. ಮೊದಲು ಅವರನ್ನು ಜೈಲಿಗೆ ಹಾಕಿ ಎಂದು ಒತ್ತಾಯಿಸಿದ್ಧಾರೆ.

ಜಮೀರ್ ಹೇಳಿದ್ದೇನು?ಪಾದರಾಯನಪುರಕ್ಕೆ ಜನರನ್ನು ಕ್ವಾರಂಟೈನ್​ಗೆ ಕರೆದೊಯ್ಯಲು ಬೆಳಗ್ಗೆ ಬನ್ನಿ ಎಂದು ಹೇಳಿದ್ದೆ. ಆದರೂ ರಾತ್ರಿ ಹೊತ್ತು ಇವರು ಹೋಗಿದ್ಧಾರೆ. ಅಲ್ಲಿದ್ದ ಬಡವರು ಮತ್ತು ಅನಕ್ಷರಸ್ಥರಿಗೆ ಇದರಿಂದ ಭಯ ಆಗಿ ಈ ಗಲಾಟೆ ಆಗಿರಬಹುದು. ಏನೇ ಆದರೂ ಘಟನೆ ಆಗಬಾರದಿತ್ತು. ನಾನು ಖಂಡಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನನ್ನ ಅಭ್ಯಂತರ ಇಲ್ಲ. ಆದರೆ, ಬೆಳಗ್ಗೆ ಇವರು ಹೋಗಿದ್ದರೆ ನಾನೇ ಬಂದು ಜನರಿಗೆ ಮನವೊಲಿಸುತ್ತಿದ್ದೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದರು.

Leave A Reply

Your email address will not be published.