ವಿವಾಹದಲ್ಲೂ ರಾಜಕೀಯ ಹುಡುಕಿದ ಹುಳುಗಳ ನಡುವೆ ಬಿಎಸ್‌ವೈ ಸತ್ಯದ ಪರ ಇದ್ದಾರೆ; ಹೆಚ್‌ಡಿಕೆ
ಬೆಂಗಳೂರು (ಏಪ್ರಿಲ್ 19); ಮದುವೆಯಂತಹ ಕೌಟುಂಬಿಕ ಸಮಾರಂಭದಲ್ಲೂ ರಾಜಕೀಯ ಹುಡುಕಿದ ಕೆಲವು ಸೋಷಿಯಲ್ ಮೀಡಿಯಾ ಹುಳುಗಳ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸತ್ಯದ ಪರ ನಿಂತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಮದುವೆಯನ್ನು ಏಪ್ರಿಲ್ 17ರಂದು ನೆರವೇರಿಸಲಾಗಿತ್ತು. ಆದರೆ. ಈ ಸಮಾರಂಭದ ಮೂಲಕ ಲಾಕ್‌ಡೌನ್ ಅನ್ನು ಉಲ್ಲಂಘಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುದುಕೊಂಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್‌ಡಿಕೆ ವಿರುದ್ಧ ಹಲವರು ಕಿಡಿ ಕಾರಿದ್ದರು. ಈ ಎಲ್ಲಾ ಆರೋಪಗಳಿಗೂ ಕುಮಾರಸ್ವಾಮಿ ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಉತ್ತರ ನೀಡಿದ್ದಾರೆ.
“ನಿಖಿಲ್ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ, ನಿಯಮ ಪಾಲಿಸಿದರೂ ಇದ್ಯಾವುದೂ ಪಾಲನೆ ಆಗಿಲ್ಲ ಎಂಬ ಚರ್ಚೆಗಳು ನಡೆದವು. ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಷಯದಲ್ಲೂ ವಿಷ ಕಾರುವ ಮನಸ್ಥಿತಿಗಳು ರಾರಾಜಿಸಿದವು.
ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇವೆಲ್ಲವನ್ನೂ ನಿರಾಕರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ” ಎಂದು ಪ್ರಶಂಶೆ ವ್ಯಕ್ತಪಡಿಸಿದರು.