‘ಎಚ್ಡಿಕೆಯದ್ದು ದೊಡ್ಡ ಕುಟುಂಬವಾದರೂ ನಿಖಿಲ್ ಮದುವೆ ಸರಳವಾಗಿ ಆಗಿದೆ‘: ಚರ್ಚೆ ಅನಗತ್ಯ ಎಂದ ಸಿಎಂ ಬಿಎಸ್ವೈ
ಬೆಂಗಳೂರು(ಏ.18): ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರದ್ದು ದೊಡ್ಡ ಕುಟುಂಬವಾದರೂ ನಿಖಿಲ್ ವಿವಾಹ ಸರಳವಾಗಿ ನಡೆದಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಏ.20ರ ನಂತರ ರಾಜ್ಯದಲ್ಲಿ ಲಾಕ್ಡೌನ್ಗೆ ಕೆಲವು ಕ್ಷೇತ್ರಗಳಲ್ಲಿ ಹೇಗೆ ವಿನಾಯಿತಿ ನೀಡಬೇಕು? ಎಂಬ ವಿಚಾರದ ಕುರಿತು ಮಾಹಿತಿ ನೀಡಲು ಸಿಎಂ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ಕರೆದಿದ್ದರು. ಇಲ್ಲಿನ ಸುದ್ದಿಗೋಷ್ಠಿಯಲ್ಲಿ ಸಿಎಂ ಹೀಗೆ ಹೇಳುವ ಮೂಲಕ ಎಚ್ಡಿಕೆ ಕುಟುಂಬದ ವಿವಾದದ ಕುರಿತಾದ ಚರ್ಚೆಗೆ ತೆರೆ ಎಳೆದರು.
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆ ಸರಳವಾಗಿ ನಡೆದಿದೆ. ವಿವಾಹದ ವೇಳೆ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ. ಕಾನೂನಿನಡಿಯಲ್ಲೇ ವಿವಾಹ ಜರುಗಿದೆ. ಹಾಗಾಗಿ ಈ ಬಗ್ಗೆ ಚರ್ಚೆ ಅನಗತ್ಯ. ನೂತನ ವಧು-ವರರಿಗೆ ನಾನು ಶುಭಾಶಯ ಕೋರುತ್ತೇನೆ ಎಂದರು.
ಇತ್ತೀಚೆಗೆ ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಹಾಗೂ ರೇವತಿ ಅವರ ವಿವಾಹ ಸರಳವಾಗಿ ನೆರವೇರಿದೆ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಕುಟುಂಬ ಸದಸ್ಯರ ನಡುವೆ ನಿಖಿಲ್ ಕುಮಾರ ಸ್ವಾಮಿ ಮತ್ತು ರೇವತಿ ಅವರ ವಿವಾಹ ಮಹೋತ್ಸವ ನಡೆಯಿತು. ಮದುವೆಗಾಗಿ ಮನೆಯ ಮುಂಭಾಗ ವಿಶೇಷವಾಗಿ ನಿರ್ಮಿಸಲಾಗಿದ್ದ ಮಂಟಪದಲ್ಲಿ ನಿಖಿಲ್ ರೇವತಿಗೆ ತಾಳಿಕಟ್ಟುವ ಮೂಲಕ ಮದುವೆ ಮಾಡಿಕೊಂಡರು.
ಎಚ್ಡಿಕೆ ಕುಟುಂಬದ ಹಿರಿಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಧಾರೆ ಕಾರ್ಯ ನಡೆಸಿಕೊಟ್ಟರು. ಇನ್ನು ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಬೀಗರು, ಶಾಸಕ ಎಚ್.ಡಿ. ರೇವಣ್ಣ, ಭವಾನಿ ದಂಪತಿ, ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಂಡಿದ್ದರು.