ರಾಜ್ಯದಲ್ಲಿಂದು 38 ಹೊಸ ಕೊರೋನಾ ಕೇಸ್ ಪತ್ತೆ; ಮೈಸೂರೊಂದರಲ್ಲೇ 12 ಜನರಿಗೆ ಸೋಂಕು
ಬೆಂಗಳೂರು (ಏ. 17): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ನಿನ್ನೆ ಸಂಜೆಯಿಂದ ಇಂದಿನವರೆಗೆ ಹೊಸದಾಗಿ 38 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾಗಿರುವ ಕೊರೋನಾ ಪಾಸಿಟಿವ್ ಕೇಸುಗಳಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಈಗಾಗಲೇ 13 ಜನರು ಸಾವನ್ನಪ್ಪಿದ್ದಾರೆ. 353 ಸೋಂಕಿತರಲ್ಲಿ 82 ಜನರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಹೊಸದಾಗಿ 38 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 9, ಮೈಸೂರಿನಲ್ಲಿ 12, ಮಂಡ್ಯದಲ್ಲಿ 3, ಬಳ್ಳಾರಿಯಲ್ಲಿ 7, ಚಿಕ್ಕಬಳ್ಳಾಪುರದಲ್ಲಿ 3, ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ 1, ವಿಜಯಪುರದಲ್ಲಿ 2, ಬೀದರ್ನಲ್ಲಿ 1 ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಮೈಸೂರಿನಲ್ಲಿ 12 ಹೊಸ ಕೊರೋನಾ ಕೇಸುಗಳು ಪತ್ತೆಯಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 9 ಜನರಿಗೆ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಿನ 7ರಲ್ಲಿ 6 ಜನರಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ದಕ್ಷಿಣ ಕನ್ನಡದ ಉಪ್ಪಿನಂಗಡಿಯ ವ್ಯಕ್ತಿ ಮಾ. 28ರಂದು ದೆಹಲಿಗೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬೀದರ್ನ ಸೋಂಕಿತ ವ್ಯಕ್ತಿಗೆ ಕೂಡ ದೆಹಲಿ ಪ್ರಯಾಣದಿಂದಲೇ ಸೋಂಕು ತಗುಲಿದೆ ಎನ್ನಲಾಗಿದೆ.