ಹೆಚ್ಚಾಗುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ; ತಜ್ಞರು, ಅಧಿಕಾರಿಗಳೊಂದಿಗೆ ಸಿಎಂ ನಡೆಸಿದ ಸಭೆಯ ಪ್ರಮುಖಾಂಶಗಳು
ಬೆಂಗಳೂರು: ರಾಜ್ಯದಲ್ಲಿ ಕೋರೋನಾ ಸೋಂಕು ಪ್ರಕರಣಗಳು ಕಳೆದ ಮೂರು ದಿನಗಳಿಂದ ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ತಜ್ಞ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಪ್ರಕರಣಗಳು ಪ್ರಾರಂಭದಲ್ಲಿಯೇ ವರದಿಯಾದಲ್ಲಿ ಚಿಕಿತ್ಸೆ ಹಾಗೂ ಜೀವ ಉಳಿಸುವ ನಿಟ್ಟಿನಲ್ಲಿ ಸಹಕಾರಿಯಾಗುವುದು ಎಂದು ವೈದ್ಯರಿಂದ ಸಲಹೆ.
ಇಂದು ಬೆಳಗ್ಗೆವರೆಗೆ 38 ಪ್ರಕರಣಗಳು ವರದಿಯಾಗಿವೆ.
ಚಿಕಿತ್ಸೆ ವಿಧಿ-ವಿಧಾನಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ರೋಗಿಗಳು ರೋಗ ಲಕ್ಷಣ ಕಂಡು ಬಂದ ಮೇಲೆಯೂ ಸರಾಸರಿ 4 ದಿನದ ನಂತರ ಬರುತ್ತಿದ್ದಾರೆ. ಆದ್ದರಿಂದ ಜನರು ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ನಾನು ಮನವಿ ಮಾಡುತ್ತೇನೆ.
ಐಸಿಯುನಲ್ಲಿರುವ ವ್ಯಕ್ತಿಗಳ ಚಿಕಿತ್ಸೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಹಾಗೂ ಅವರಿಗೆ ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಯಿತು.
ಜೊತೆಗೆ ಕೋವಿಡ್ 19 ಚಿಕಿತ್ಸೆಗೆ ಸೂಕ್ತ ಮಾರ್ಗಸೂಚಿಯನ್ನು ಅನುಸರಿಸಲು ಸಹ ತೀರ್ಮಾನಿಸಲಾಯಿತು.
ಪ್ಲಾಸ್ಮಾ ಚಿಕಿತ್ಸೆಗೆ ಐಸಿಎಂಆರ್ ಅನುಮತಿಗೆ ಕಾಯಲಾಗುತ್ತಿದೆ.
ಜ್ವರ, ಶೀತ, ಉಸಿರಾಟದ ತೊಂದರೆ ಇರುವವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಇದಕ್ಕಾಗಿ ಪ್ರತ್ಯೇಕ ಆಪ್ ಅಭಿವೃದ್ಧಿ ಪಡಿಸಲಾಗುತ್ತಿದೆ.
ಯಾವುದೇ ಪ್ರಕರಣ ವರದಿಯಾಗದೆ ಇರುವ ಜಿಲ್ಲೆಗಳಲ್ಲಿಯೂ ಈ ರೋಗ ಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲಿ ಎರಡು ಹಾಗೂ ಪ್ರತಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಐಸಿಎಂಆರ್ ಮಾರ್ಗಸೂಚಿ ಹೊರಡಿಸಿದೆ.
ಈ ನಿಟ್ಟಿನಲ್ಲಿ ಏಪ್ರಿಲ್ ಅಂತ್ಯದೊಳಗೆ ಇನ್ನೂ 10 ಪ್ರಯೋಗಾಲಯಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ.
ಲಾಕ್ ಡೌನ್ ಸಡಿಲಗೊಳಿಸಿದ ನಂತರ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಅವುಗಳನ್ನು ನಿಭಾಯಿಸುವ ಸಿದ್ಧತೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜೊತೆಗೆ, ವಿವಿಧ ಕಂಪೆನಿಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸುವ ಸಂದರ್ಭದಲ್ಲಿ ಥರ್ಮಲ್ ಸ್ಕಾನರ್ ಮತ್ತಿತರ ಸರಳ ಪರೀಕ್ಷಾ ಪರಿಕರಗಳ ಮೂಲಕ ತಮ್ಮ ಸಿಬ್ಬಂದಿಯಲ್ಲಿ ರೋಗ ಲಕ್ಷಣವಿದೆಯೇ ಎಂದು ಪ್ರತಿ ದಿನ ಪರೀಕ್ಷೆ ಮಾಡುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ವಿವರವಾದ ಮಾರ್ಗಸೂಚಿ ಸಿದ್ಧಪಡಿಸಲು ತೀರ್ಮಾನಿಸಲಾಯಿತು.
ಆರೋಗ್ಯ ಸೇತು ಆಪ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಡೌನ್ ಲೋಡ್ ಮಾಡಿಕೊಳ್ಳಲು ಮನವಿ ಮಾಡಲು ತೀರ್ಮಾನಿಸಲಾಯಿತು.
ಏಪ್ರಿಲ್ 21ರಂದು ಮತ್ತೆ ಸಭೆ ಸೇರಿ, ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಯಿತು.