ಏಪ್ರಿಲ್ 14ರ ಬಳಿಕ ಸೀಲ್ ಡೌನ್ ಆಗುತ್ತಾ ಬೆಂಗಳೂರು?; ಪೊಲೀಸ್ ಇಲಾಖೆ ಜೊತೆ ಸಿಎಂ ಗಂಭೀರ ಚರ್ಚೆ
ಬೆಂಗಳೂರು(ಏ.10): ರಾಜ್ಯದಲ್ಲಿ ಲಾಕ್ಡೌನ್ ನಡುವೆಯೂ ದಿನೇ ದಿನೇ ಕೊರೋನಾ ಭೀತಿ ಹೆಚ್ಚಾಗುತ್ತಲೇ ಇದೆ. ಇದುವರೆಗೂ ಕರ್ನಾಟಕದಲ್ಲಿ 6 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ಬೆಂಗಳೂರು, ಮೈಸೂರು, ಬೀದರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹಾಟ್ಸ್ಪಾಟ್ಗಳೆಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಸಹ ಕೊರೋನಾ ಭೀತಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಏಪ್ರಿಲ್ 14ರ ಬಳಿಕವೂ ಲಾಕ್ಡೌನ್ ಮುಂದುವರೆಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಅದರಲ್ಲೂ ಹಾಟ್ಸ್ಪಾಟ್ ಪ್ರದೇಶಗಳಾಗಿ ಗುರುತಿಸಲ್ಪಟ್ಟಿರುವ ಕಡೆ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಾಗುತ್ತದೆ ಎನ್ನಲಾಗುತ್ತಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ ರಾಜ್ಯ ಸರ್ಕಾರ ಏಪ್ರಿಲ್ 14ರ ಬಳಿಕ ಸೀಲ್ ಡೌನ್ ಮಾಡಲು ಚಿಂತನೆ ನಡೆಸಿದೆ.
ಹೌದು, ಮುಂದಿನ ವಾರದಿಂದಲೇ ಬೆಂಗಳೂರು ಸೇರಿದಂತೆ ಉಳಿದ ಹಾಟ್ಸ್ಪಾಟ್ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತಿಸಿದೆ ಎನ್ನಲಾಗಿದೆ. ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೊರೋನಾ ಪೀಡಿತರ ಸಂಖ್ಯೆ ಗಣನೀಯ ಏರಿಕೆಯಾಗುತ್ತಿರುವ ಹಿನ್ನಲೆ ರಾಜ್ಯ ಸರ್ಕಾರ ಸೀಲ್ ಡೌನ್ ಗೆ ಸಿದ್ದತೆ ನಡೆಸಿದೆ. ಕ್ವಾರೆಂಟೈನ್ ಪಟ್ಟಿಯಲ್ಲಿ ಇರುವವರಿಗೂ ಕೊರೋನಾ ಸೋಂಕು ಪಾಸಿಟಿವ್ ಆಗುವ ಲಕ್ಷಣ ಇದ್ದರೂ ಸಹ ಬೆಂಗಳೂರು ರೆಡ್ ಜೋನ್ ಪಟ್ಟಿಗೆ ಸೇರುತ್ತದೆ. ಆತಂಕ ಪಡುವ ಅಗತ್ಯತೆ ಸದ್ಯಕ್ಕೆ ಇಲ್ಲದಿದ್ದರೂ ಸಹ ಬೆಂಗಳೂರು ಡೇಂಜರ್ ಲಿಸ್ಟ್ ನಲ್ಲಿದೆ.
ಕೇವಲ ಮುಖ್ಯ ರಸ್ತೆಗಳಲ್ಲಿ ಮಾತ್ರ ವಾಹನ ಸಂಚಾರ ಇರುವಂತೆ ಪೊಲೀಸ್ ಇಲಾಖೆ ತಯಾರಿ ನಡೆಸಿದೆ. ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರೂ ಬೈಕ್ಗಳ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆ, ಪೊಲೀಸರು ಈ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಬೈಕ್ ಸವಾರರ ಕಾಟ ತಪ್ಪಿಸಲು ಪೊಲೀಸ್ ಇಲಾಖೆಯ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದೆ.
ಒಂದು ವೇಳೆ ಏ.14ರಂದು ಬೆಂಗಳೂರು ರೆಡ್ ಜೋನ್ ಅಂತ ಘೋಷಣೆಯಾದರೆ ಸೀಲ್ ಡೌನ್ ಆಗಲಿದೆ. ಸೀಲ್ ಡೌನ್ ಆದರೆ ಯಾರೊಬ್ಬರೂ ಮನೆಯಿಂದ ಹೊರಗೆ ಬರುವ ಆಗಿಲ್ಲ. ಮೆಡಿಕಲ್, ತರಕಾರಿ ಅಂತ ಸುಮ್ಮನೆ ಹೊರಗಡೆ ಬರಲು ಸಹ ಆಗಲ್ಲ. ತೀರಾ ಎಮರ್ಜೆನ್ಸಿ ಇದ್ದರೆ ಮಾತ್ರ ಅಂತವರಿಗೆ ಹೊರಗೆ ಬರಲು ಅವಕಾಶ ಇದೆ.ಸೀಲ್ ಡೌನ್ ಅಂತ ಮಾಡಿದ್ರೆ ಅಪಾಯದ ಸ್ಥಿತಿಯಲ್ಲಿ ಇದ್ದ ಹಾಗೆಯೇ ಇರುತ್ತದೆ ಪರಿಸ್ಥಿತಿ. ಇದೇ ಕಾರಣಕ್ಕೆ ಎಲ್ಲಾ ಏರಿಯಾದ ಸಬ್ ರಸ್ತೆಗಳನ್ನು ಮುಚ್ಚುತ್ತಿದೆ. ಯಾವುದೇ ವಾಹನ ಹೊರಗಡೆ ಬಂದರೆ ಮುಖ್ಯ ರಸ್ತೆಗೆ ಬರಲೇಬೇಕು ಎನ್ನುವುದು ಪೊಲೀಸ್ ಇಲಾಖೆಯ ಪ್ಲ್ಯಾನ್ ಆಗಿದೆ. ಬೆಂಗಳೂರು ನಗರ ರೆಡ್ ಜೋನ್ ಪಟ್ಟಿಗೆ ಸೇರಬಾರದು ಎಂದು ಪೊಲೀಸ್ ಇಲಾಖೆ ಈ ಕ್ರಮ ಕೈಗೊಳ್ಳುತ್ತಿದೆ.