ಸುಳ್ಳು ಸುದ್ದಿ ನಂಬದಿರಿ; ಎರಡು ವಾರ್ಡ್ ಮಾತ್ರ ಸೀಲ್ಡೌನ್: ಬೆಂಗಳೂರು ಪೊಲೀಸ್ ಸ್ಪಷ್ಟನೆ
ಬೆಂಗಳೂರು(ಏ. 10): ನಗರದಲ್ಲಿ ಲಾಕ್ ಡೌನ್ ಇದ್ದರೂ ಜನರು ತಲೆ ಕೆಡಿಸಿಕೊಳ್ಳದೇ ನಿರ್ಬೀಢೆಯಿಂದ ಸಾರ್ವಜನಿಕವಾಗಿ ಅಡ್ಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಬೆಂಗಳೂರನ್ನು ಸೀಲ್ ಡೌನ್ ಮಾಡಲಾಗುತ್ತಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬೆಂಗಳೂರು ಪೊಲೀಸರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಬೆಂಗಳೂರಿನ ಎರಡು ವಾರ್ಡ್ಗಳಲ್ಲಿ ಮಾತ್ರ ಸೀಲ್ ಡೌನ್ ಘೋಷಿಸಲಾಗಿದೆ. ಇತರೆಡೆ ಲಾಕ್ ಡೌನ್ ಮಾತ್ರ ಮುಂದುವರಿಯಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಭಾಸ್ಕರ್ ರಾವ್, ಬೆಂಗಳೂರಿನಲ್ಲಿ ಸೀಲ್ ಡೌನ್ ಘೋಷಿಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದೆ. ಈ ಸುದ್ದಿ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ವಾರ್ಡ್ ನಂಬರ್ 134 (ಬಾಪೂಜಿನಗರ) ಮತ್ತು 135 (ಪಾದರಾಯನಪುರ)ರಲ್ಲಿ ಮಾತ್ರ ಸೀಲ್ ಡೌನ್ ಘೋಷಿಸಲಾಗಿದೆ. ಇಲ್ಲಿ ಜನರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಮನೆಗೇ ಸರಬರಾಜು ಮಾಡಲಾಗುತ್ತಿದೆ. ಈ ವಾರ್ಡ್ನ ಜನರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.