ಬೆಳಗಾವಿಯಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಜಗದೀಶ್ ಶೆಟ್ಟರ್ ಸಭೆ
ಬೆಳಗಾವಿ, ಏಪ್ರಿಲ್ 04: ಬೆಳಗಾವಿಯಿಂದ ದೆಹಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿದ್ದವರಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನಷ್ಟು ಮಂದಿಯ ವರದಿ ಬರಬೇಕಿದೆ ಎಂದಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್. ಇಂದು ಬೆಳಗಾವಿಯಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಜಗದೀಶ್ ಶೆಟ್ಟರ್, ಜಿಲ್ಲೆಯಲ್ಲಿನ ಕೊರೊನಾ ಪ್ರಕರಣಗಳ ಕುರಿತು ಮಾಹಿತಿ ಹಂಚಿಕೊಂಡರು. “ಬೆಳಗಾವಿಯಿಂದ ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ಹೋದವರಲ್ಲಿ ಮೊದಲು 62 ಮಂದಿ ಮಾಹಿತಿ ಕಲೆ ಹಾಕಲಾಗಿದೆ. ಅವರಲ್ಲಿ ಮೂವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಆ ಬಳಿಕ ಮತ್ತೆ 18 ಜನರನ್ನು ಪೊಲೀಸರು ಪತ್ತೆ ಮಾಡಿದ್ದು, ಒಟ್ಟು ದೆಹಲಿ ಸಭೆಗೆ ಹೋಗಿ ಬಂದ 80 ಜನರು ಪತ್ತೆ ಆಗಿದ್ದಾರೆ. ಇದರಲ್ಲಿ 33 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಕಳುಹಿಸಲಾಗಿದೆ. ಇದರಲ್ಲಿ 3 ಪಾಸಿಟಿವ್ ಬಂದಿದೆ. ಉಳಿದ 30 ಜನರ ವರದಿ ನೆಗೆಟಿವ್ ಬಂದಿದೆ. ಮತ್ತೆ ಹೊಸದಾಗಿ ನಿನ್ನೆ 19 ಜನರ ಮಾದರಿ ಕಳುಹಿಸಲಾಗಿದೆ. ಇಂದು ಅಥವಾ ನಾಳೆಗೆ ವರದಿ ಬರಲಿದೆ. ಎಲ್ಲಾ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದರು.
“ಜಿಲ್ಲೆಯಲ್ಲಿ ಒಪಿಡಿ ತೆರೆಯಬೇಕೆಂದು ಖಾಸಗಿ ವೈದ್ಯರಲ್ಲಿ ವಿನಂತಿ ಮಾಡಿಕೊಂಡ ಅವರು, ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ವೈರಸ್ ಹರಡಿದ್ದರಿಂದ ಹೈಅಲರ್ಟ್ ಘೋಷಿಸಲಾಗಿದೆ. ಕೊರೊನಾ ರೋಗಿಗಳನ್ನು ಒಂದು ರೂಮ್ ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥಿತವಾಗಿ ಇಡಲಾಗಿದೆ. ಸುತ್ತಲೂ ಮೂರು ಕಿಲೋಮೀಟರ್ ನಿರ್ಬಂಧ ಹೇರಲಾಗಿದೆ. ಕೊರೊನಾ ಲ್ಯಾಬ್ ಅನ್ನು ಬೆಳಗಾವಿಯಲ್ಲಿ ತೆರೆಯಲು ಪ್ರಯತ್ನಿಸಲಾಗುವುದು” ಎಂದರು.
ಬೆಳಗಾವಿಯಲ್ಲಿ ಒಟ್ಟು 831 ಜನರ ಮೇಲೆ ನಿಗಾ ಇರಿಸಲಾಗಿದೆ. 253 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಆಸ್ಪತ್ರೆಯಲ್ಲಿ 33 ಮಂದಿಯನ್ನು ನಿಗಾ ಇರಿಸಲಾಗಿದೆ. ಜಿಲ್ಲೆಯಲ್ಲಿ 403 ಮಂದಿ 14 ದಿನಗಳ ಐಸೊಲೇಷನ್ ಪೂರ್ಣಗೊಳಿಸಿದ್ದಾರೆ. 142 ಮಂದಿ 28 ದಿನಗಳ ಐಸೊಲೇಷನ್ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 60 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 51 ವರದಿ ನೆಗೆಟಿವ್ ಬಂದಿದೆ. ಮೂರು ಕೊರೊನಾ ಪಾಸಿಟಿವ್ ಬಂದಿದೆ. ಇನ್ನಷ್ಟು ಜನರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.