ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಚಿವ ಡಿ ಸಿ ತಮ್ಮಣ್ಣ
ಬೆಂಗಳೂರು: ಸದ್ಯಕ್ಕೆ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಬುಧವಾರ ಸ್ಪ,ಷ್ಟಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಡೀಸೆಲ್ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಏರಿಕೆ ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಸದ್ಯಕ್ಕೆ ದರ ಏರಿಕೆ ಮಾಡುವುದಿಲ್ಲ ಎಂದರು.
ಶೇ 15ರಷ್ಟು ಪ್ರಯಾಣ ದರವನ್ನು ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆ ಇದೆ. ಆದರೆ, ದರ ಏರಿಕೆ ಮಾಡುವುದಿಲ್ಲ. ಇದರಿಂದ 500 ಕೋಟಿ ನಷ್ಟ ಉಂಟಾಗಲಿದೆ ಎಂದು ಸಚಿವರು ವಿವರಿಸಿದರು.
ಇದೇ ವೇಳೆ ಬಸ್ ನಿಲ್ದಾಣಗಳನ್ನು ವಾಣಿಜ್ಯೀಕರಿಸುವ ಉದ್ದೇಶವಿದೆ. ಇದರಿಂದ 100 ರಿಂದ 200 ಕೋಟಿಯಷ್ಟು ಆದಾಯ ಸಂಸ್ಥೆಗೆ ಬರುತ್ತದೆ. ಈ ಕುರಿತು ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದು ತಮ್ಮಣ್ಣ ತಿಳಿಸಿದರು.
ಡೀಸೆಲ್ ದರ ಹೆಚ್ಚಳ್ಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮವು ನಿತ್ಯ ಕೋಟ್ಯಾಂತರ ರುಪಾಯಿಗಳ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಬಸ್ ಪ್ರಯಾಣ ದರ ಏರಿಸಬೇಕು ಎಂದು ಕೋರಲಾಗಿತ್ತು.
ಆದರೆ, ನಿಗಮದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ, ಟಿಕೆಟ್ ದರ ಏರಿಸಲು ನಿರಾಕರಿಸಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ಬಾರದೇ ಇರಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.