ಡಿಕೆಶಿ ವಿರುದ್ಧದ ದೂರು ರಾಜಕೀಯ ಪಿತೂರಿ: ಕಾಂಗ್ರೆಸ್ ನಾಯಕರ ಆರೋಪ
ಬೆಂಗಳೂರು: ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳ ಆರೋಪ ಮತ್ತು ದೂರಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕರು ಡಿಕೆಶಿ ಬೆನ್ನೆಲುಬಾಗಿ ನಿಂತಿದ್ದಾರೆ.
ತಮ್ಮ ಪಕ್ಷದ ಸಚಿವರ ಪರವಾಗಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಕೇಂದ್ರ ಸರ್ಕಾರ ಹಲವು ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅವುಗಳಲ್ಲಿ ಆದಾಯ ತೆರಿಗೆ ಇಲಾಖೆ ಕೂಡ ಒಂದು. ತಮ್ಮ ರಾಜಕೀಯ ವಿರೋಧಿ ಪಕ್ಷದ ನಾಯಕರನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ದಾಳಿ ಮಾಡಿಸುತ್ತಿದೆ. ಆದರೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಶಿವಕುಮಾರ್ ಅವರಿಗೆ ನೊಟೀಸ್ ಹೋಗುವುದು ಇದೇನು ಹೊಸದಲ್ಲ. ಅದಕ್ಕೆ ಅವರು ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಸುದ್ದಿಗಾರರಿಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದರು.
ಈ ಮಧ್ಯೆ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ವಸತಿ ಖಾತೆ ಸಚಿವ ಯುಟಿ ಖಾದರ್, ಐಟಿ ಅಧಿಕಾರಿಗಳ ಈ ಕ್ರಮ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ.
ಸಚಿವ ಡಿ ಕೆ ಶಿವಕುಮಾರ್ ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.