ಪತ್ರಕರ್ತೆ ಗೌರಿ ಹತ್ಯೆ ಆರೋಪಿಗಳಿಗೆ ಪೊಲೀಸ್ ಹಿಂಸೆ: ದಾಖಲೆ ಕೇಳಿದ ಹೈಕೋರ್ಟ್
ಬೆಂಗಳೂರು; ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 4 ಆರೋಪಿಗಳಿಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್’ಮೆಂಟ್ ನೀಡಿದ್ದಾರೆನ್ನಲಾದ ಆರೋಪಕ್ಕೆ ಸಂಬಂಧಪಟ್ಟಂತೆ ಅಧೀನ ನ್ಯಾಯಾಲಯಗಳಿಗೆ ಸಲ್ಲಿಕೆಯಾಗಿರುವ ದಾಖಲೆಗಳ ಪರಿಶೀಲನೆ ನಂತರನೇ ಈ ಕುರಿತ ತಕರಾರು ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ಸೋಮವಾರ ನಿರ್ಧರಿಸಿದೆ.
ತನಿಖೆ ಸಂದರ್ಭದಲ್ಲಿ ಪೊಲೀಸರು ತಮಗೆ ಚಿತ್ರಹಿಂಸೆ ನೀಡಿದ್ದು, ಆ ಕುರಿತು ವಿಶೇಷ ವಿಚಾರಣೆ ನಡೆಸಲು ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಾದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮನೋಹರ್ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದೇಗ್ವೆಕರ್ ಹೈಕೋರ್ಟ್’ಗೆ ತಕಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್.ಪಿ. ಅಮೃತೇಶ್ ಅವರು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು. ಪೊಲೀಸರು ನೀಡಿದ್ದಾರೆನ್ನಲಾದ ಚಿತ್ರಹಿಂಸೆಯ ಕುರಿತು 1ನೇ ಮತ್ತು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ತಿಳಿಸಿದ್ದರೂ ನ್ಯಾಯಾಲಯಗಳು ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಆದೇಶ ನೀಡಿಲ್ಲ ಎಂದು ದೂರಿದರು.
ಸರ್ಕಾರಿ ಅಭಿಯೋಜಕ ರಾಚಯ್ಯ ಉತ್ತರಿಸಿ, ಅರ್ಜಿದಾರರಿಗೆ ಪೊಲೀಸರು ಚಿತ್ರಹಿಂಸೆ ಅಥವಾ ಕಿರುಕುಳ ನೀಡಿಲ್ಲ. ಅರ್ಜಿದಾರರ ಪರ ವಕೀಲರು ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಈ ವರೆಗೂ ಹಲವು ಬಾರಿ ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಒಂದು ಬಾರಿಯೂ ಆರೋಪಿಗಳು ತಮಗಾಗಿರುವ ಚಿತ್ರಹಿಂಸೆಯ ಬಗ್ಗೆ ನ್ಯಾಯಾಧೀಶರಿಗೆ ತಿಳಿಸಿಲ್ಲ ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲರು ಸಲ್ಲಿಸಿರುವ ಪ್ರಮಾಣಪತ್ರದ ಪ್ರತಿಯನ್ನು 1ನೇ ಹಾಗೂ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಕಳುಹಿಸಬೇಕು. ಅದಕ್ಕೆ ಪ್ರತಿಯಾಗಿ ವಕೀಲರ ಆರೋಪ ಸಂಬಂಧ 1ನೇ ಮತ್ತು 3ನೇ ಎಸಿಎಂಎಂ ನ್ಯಾಯಾಲಯಗಳು ವರದಿಯನ್ನು ಹೈಕೋರ್ಟ್’ಗೆ ಸಲ್ಲಿಸಬೇಕು. ಆದೇಶ ಪ್ರತಿ ಲಭ್ಯವಾದ 10 ದಿನದೊಳಗೆ ಅಧೀನ ನ್ಯಾಯಾಲಯಗಳು ವರದಿ ಕಳುಹಿಸಿಕೊಡಬೇಕು. ನಂತರ ಅರ್ಜಿ ವಿಚಾರಣೆ ಮಾಡಲು ನ್ಯಾಯಾಲಯ ಸೂಚಿಸಿತು.
ಪೊಲೀಸ್ ಅಧಿಕಾರಿಗಳು ನನಗೆ ಹಿಗ್ಗಾಮುಗ್ಗಾ ಥಳಿಸಿದ್ದರು ಎಂದು ಕಾಳೆ ಹೇಳಿದ್ದ: ವಕೀಲ
ಕಸ್ಟಡಿಯಲ್ಲಿ ಪೊಲೀಸ್ ಅಧಿಕಾರಿಗಳು ನನಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಎರಡೂ ಕೆನ್ನೆಗಳಿಗೂ ಲೆಕ್ಕವಿಲ್ಲದಷ್ಟು ಬಾರಿ ಹೊಡೆದಿದ್ದರು. ಕಾಲು ಮಂಡಿಗಳಿಗೆ ಅಧಿಕಾರಿಗಳು ಹೊಡೆದಿದ್ದು, ಗಾಯಗಳು ಗುರುತುಗಳನ್ನು ಕಾಳೆ ತೋರಿಸಿದ್ದ ಎಂದು ಆರೋಪಿ ಕಾಳೆ ಪರ ವಕೀಲ ಅಮೃತೇಶ್ ಅವರು ಹೇಳಿದ್ದಾರೆ.