ಗೌರಿ ಹತ್ಯೆ ಪ್ರಕರಣ: ವಿಚಾರಣೆ ಪೂರ್ಣಗೊಳ್ಳುವವರೆಗೂ ಜಾಮೀನು ಅರ್ಜಿ ಸಲ್ಲಿಸದಿರಲು ಆರೋಪಿಗಳ ಪರ ವಕೀಲರ ನಿರ್ಧಾರ
ಬೆಂಗಳೂರು; ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆಗಳು ವಿಚಾರಣೆಗಳನ್ನು ಪೂರ್ಣಗೊಳಿಸುವವರೆಗೂ ಆರೋಪಿಗಳ ಪರ ಜಾಮೀನು ಅರ್ಜಿ ಸಲ್ಲಿಸದಿರಲು ಆರೋಪಿಗಳ ಪರ ವಕೀಲರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ವಿಚಾರವಾದಿ ನರೇಂದ್ರ ದಾಬೋಲ್ಕರ್ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ, ಮಹಾರಾಷ್ಟ್ರ ಎಸ್ಐಟಿ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣವನ್ನು ನಡೆಸುತ್ತಿದೆ. ಡಾ.ಎಂಎಂ ಕಲಬುರ್ಗಿ ಹತ್ಯೆ ಪ್ರಕರಣವನ್ನು ಕರ್ನಾಟಕದ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಾದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮನೋಹರ್ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದೇಗ್ವೆಕರ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಈ ಎಲ್ಲಾ ತನಿಖಾ ಸಂಸ್ಥೆಗಳು ಕಾದು ಕುಳಿತಿವೆ ಎಂದು ಹೇಳಲಾಗುತ್ತಿದೆ.
ಆರೋಪಿಗಳ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರೆ, ನ್ಯಾಯಲಾಯ ಆರೋಪಿಗಳನ್ನು ಪೊಲೀಸ ವಶಕ್ಕೆ ನೀಡಿದೆ, ಕಾನೂನು ಪ್ರಕ್ರಿಯೆಗಳು ವಿಳಂಬವಾಗುತ್ತವೆ. ಹೀಗಾಗಿ ತನಿಖಾ ಸಂಸ್ಥೆಗಳು ವಿಚಾರಗಳನ್ನು ಪೂರ್ಣಗೊಳಿಸಿದ ಬಳಿಕವೇ ಜಾಮೀನು ಅರ್ಜಿಗಳನ್ನು ಸಲ್ಲಿಸಲು ಆರೋಪಿಗಳ ಪರ ವಕೀಲರು ನಿರ್ಧರಿಸಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಯೊಬ್ಬರ ಪರ ವಕೀಲರು ಈ ಬಗ್ಗೆ ದೃಢಪಡಿಸಿದ್ದು, ಇತರೆ ತನಿಖಾ ಸಂಸ್ಥೆಗಳೂ ಕೂಡ ಆರೋಪಿಗಳನ್ನು ವಿಚಾರಣೆ ನಡೆಸಲು ಮುಂದಾಗಿವೆ ಎಂದು ಎಸ್ಐಟಿ ಅಧಿಕಾರಿಗಳು ಅನೌಪಚಾರಿಕವಾಗಿ ಮಾಹಿತಿಯನ್ನು ನೀಡಿದರು. ಜೂನ್.27ರೊಳಗಾಗಿ ಯಾವುದೇ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದುಕೊಳ್ಳದೇ ಹೋದರೆ, ಆರೋಪಿಗಳ ನ್ಯಾಯಾಂಗ ಬಂಧನ ಅಂತ್ಯಗೊಳ್ಳುತ್ತವೆ. ನಂತರ ನಾವು ಜಾಮೀನು ಅರ್ಜಿಯನ್ನು ಸಲ್ಲಿಸುತ್ತೇವೆಂದು ಹೇಳಿದ್ದಾರೆ.