25 ವರ್ಷಗಳ ಹಳೆಯ ಭೂ ಪ್ರಕರಣಕ್ಕೆ ಮರುಜೀವ, ಸಿದ್ದರಾಮಯ್ಯ ವಿರುದ್ಧ ಎಫ್ಐಆರ್’ಗೆ ಕೋರ್ಟ್ ಆದೇಶ
ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೂ ಭೂ ಸಂಕಟ ಎದುರಾಗಿದ್ದು, 25 ವರ್ಷಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಡಿಸಿಎಂ ಆಗಿದ್ದ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆ ಉಲ್ಲಂಘಿಸಿ ವಿಜಯನಗರ 2ನೇ ಹಂತದಲ್ಲಿ ಅಕ್ರಮ ನಿವೇಶನ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ವಕೀಲ ಗಂಗರಾಜು, ಸಂಗಮೇಶ್ ಎಂಬುವವರು ದೂರು ದಾಖಲಿಸಿದ್ದರು. ಇದೀಗ ಈ ದೂರಿನ ಸುದೀರ್ಘ ವಿಚಾರಣೆ ಬಳಿಕ ಮೈಸೂರಿನ 2ನೇ ಪ್ರಧಾನ ಸತ್ರ ನ್ಯಾಯಾಲಯ ಸಿದ್ದರಾಮಯ್ಯ ವಿರುಧ ಎಫ್ ಐಆರ್ ದಾಖಲಿಸುವಂತೆ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಿಂದಲೂ ಕಾನೂನು ಹೋರಾಟ ಮಾಡುತ್ತಾ ಬಂದಿದ್ದಾರೆ. ವಕೀಲ ಗಂಗರಾಜು, ಸಂಗಮೇಶ್ ಎಂಬುವವರು ಐಪಿಸಿ ಸೆಕ್ಷನ್ 120ಬಿ, 197, 166, 167, 169, 200, 417, 409, 420, 468ರಡಿ ಪ್ರಕರಣ ದಾಖಲಿಸಿದ್ದರು. ಸದ್ಯ ಲಕ್ಷ್ಮೀಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಲಿದೆ.