EBM News Kannada
Leading News Portal in Kannada

ಸರ್ಕಾರದಿಂದ ಸಾಲಮನ್ನಾ ಅಸ್ಪಷ್ಟತೆ: ಸಂಕಷ್ಟದಲ್ಲಿ ರೈತರು, ಸಹಕಾರಿ ಬ್ಯಾಂಕುಗಳು

0

ಬೆಂಗಳೂರು: ರೈತರ ಸಾಲ ಮನ್ನಾ ಬಗ್ಗೆ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಾರದಿರುವುದು ರಾಜ್ಯದ ರೈತ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ಪಡೆದುಕೊಂಡ ರೈತರಿಗೆ ಇಂದು ಬ್ಯಾಂಕುಗಳಲ್ಲಿ ಸಾಲದ ನವೀಕರಣ ಮಾಡಿಸಿಕೊಳ್ಳಲು ಕೊನೆಯ ದಿನವಾಗಿದೆ. ಒಂದು ವೇಳೆ ನವೀಕರಣ ಮಾಡಿಸಿಕೊಳ್ಳದಿದ್ದರೆ ಶೇಕಡಾ 12ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ. ಸರ್ಕಾರ ಸಾಲಮನ್ನಾ ಮಾಡಿದರೆ ನವೀಕರಣ ಮಾಡುವ ಅವಶ್ಯಕತೆಯಿಲ್ಲವಲ್ಲ ಎಂಬ ನಿರೀಕ್ಷೆಯಲ್ಲಿ ರಾಜ್ಯದ ರೈತ ಸಮುದಾಯವಿತ್ತು.

ಸಾಲ ಮನ್ನಾ ನಿರೀಕ್ಷೆಯಲ್ಲಿರುವ ಹಲವು ರೈತರು ಪ್ರಾಥಮಿಕ ಕ್ರೆಡಿಟ್ ಸೌಹಾರ್ದ ಸೊಸೈಟಿಗಳಿಂದ ಪಡೆದಿರುವ ಸಾಲಗಳ ಮುಂಗಡ ಮೊತ್ತವನ್ನು ಇಲ್ಲವೇ ಬಡ್ಡಿಯನ್ನು ಕೂಡ ಪಾವತಿಸಿಲ್ಲ. ಇದರಿಂದಾಗಿ ಹಣದ ಮರುಪಾವತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ವರ್ಷ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ನಿರೀಕ್ಷಿತ ಫಸಲು ಸಿಗಬಹುದೆಂದು ರೈತರು ಖುಷಿಯಲ್ಲಿರುವಾಗ ಸಾಲಮನ್ನಾ ವಿಚಾರ ಅವರಿಗೆ ಕೃಷಿ ಚಟುವಟಿಕೆ ಮಾಡಲು ಉತ್ತೇಜನ ಸಿಗದಂತೆ ಮಾಡಿದೆ.

ಸಾಲ ಮನ್ನಾ ಘೋಷಣೆಯಲ್ಲಿ ಸರ್ಕಾರ ವಿಳಂಬ ಮಾಡಿದರೆ ಕೃಷಿ ಸಹಕಾರ ಬ್ಯಾಂಕಿನಿಂದ ಬೆಳೆ ಸಾಲ ಹೊಸದಾಗಿ ಪಡೆಯಲು ಪ್ರಯತ್ನಿಸುತ್ತಿರುವವರಿಗೆ ಸಿಗದಿರಬಹುದು. ಈ ಖಾರಿಫ್ ಋತುವಿನಲ್ಲಿ ಸಹಕಾರಿ ಬ್ಯಾಂಕುಗಳು ಸಾಲ ನೀಡಿಕೆಯಲ್ಲಿ ಪಕ್ಷಪಾತ ಮಾಡುತ್ತಿವೆ ಎನ್ನುತ್ತಾರೆ ರೈತರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಾಪುರ ನಾಗೇಂದ್ರ, ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವುದು ತುರ್ತು ಸಂಗತಿಯಾಗಿದೆ. ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿದರದಲ್ಲಿ ರೈತರಿಗೆ 3 ಲಕ್ಷದವರೆಗೆ ಸಾಲಮನ್ನಾ ಮತ್ತು ಸಾಲದ ನವೀಕರಣ ಮಾಡುವ ವಿಷಯ ತುರ್ತಾಗಿ ಆಗಬೇಕಾಗಿದೆ ಎನ್ನುತ್ತಾರೆ.

ಸಣ್ಣ ಮತ್ತು ಮಧ್ಯಮ ಗಾತ್ರದ ರೈತರು ಹೊಸ ಸಾಲ ಸಿಗದಿದ್ದರೆ ತೊಂದರೆಗೀಡಾಗುತ್ತಾರೆ. ಭತ್ತ, ಹತ್ತಿ, ಕಬ್ಬು ಇತ್ಯಾದಿಗಳನನು ಬೆಳೆಯುವ ರೈತರಿಗೆ ಇದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ ಎಂದು ರೈತ ಸಂಘ ಒತ್ತಾಯಪಡಿಸಿದರೂ ಕೂಡ ನಮಗೆ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದವರಿಗೆ ಸಹ ಇದೇ ಸಮಸ್ಯೆಯಾಗಿದೆ. ಸಾಲಮನ್ನಾದ ಅನಿಶ್ಚಿತತೆ ಈ ಖಾರಿಫ್ ಋತುವಿನಲ್ಲಿ ರೈತರನ್ನು ಸಂಕಷ್ಟಕ್ಕೀಡುಮಾಡಲಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದ 8,160 ಕೋಟಿ ರೂಪಾಯಿಗಳಲ್ಲಿ ಉಳಿದಿರುವ ಶೇಕಡಾ 50ರಷ್ಟು ಸಾಲಮನ್ನಾ ಪಾವತಿಯಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಕೆಲವು ರೈತರಿಗೆ ಹೊಸ ಸಾಲಗಳು ಬ್ಯಾಂಕು ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಸಿಗುತ್ತಿಲ್ಲ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ಅಟ್ಟಹಳ್ಳಿ ದೇವರಾಜ್. ಸರ್ಕಾರ ಇನ್ನೂ ಹಣ ಪಾವತಿಸದಿರುವುದರಿಂದ ಹಲವು ರೈತರ ಸಾಲಗಳನ್ನು ನವೀಕರಣ ಮಾಡಿಲ್ಲ ಎನ್ನುತ್ತಾರೆ.

ಹಳೆ ಸಾಲವನ್ನು ಪಾವತಿ ಮಾಡದಿದ್ದರೆ ಹೊಸ ಸಾಲವನ್ನು ರೈತರಿಗೆ ನೀಡುವುದಿಲ್ಲ. ಕನಿಷ್ಟವೆಂದರೂ ಅವರು ಬಡ್ಡಿಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಹೇಳುತ್ತಾರೆ.

Leave A Reply

Your email address will not be published.