ರೇವಣ್ಣ-ಶಿವಕುಮಾರ್ ಮುಸುಕಿನ ಗುದ್ದಾಟ: ತಿಂಗಳು ಕಳೆಯುವುದರೊಳಗೆ ದೋಸ್ತಿಗಳ ತಿಕ್ಕಾಟ!
ಬೆಂಗಳೂರು ಜೆಡಿಎಸ್ ಸಮ್ಮಿಶ್ರ ಸರ್ಕಾರದ ನೂತನ ಮಂತ್ರಿಗಳು ಅಧಿಕಾರ ಸ್ವೀಕರಿಸಿ ಇನ್ನೂ ವಾರ ಕಳೆದಿಲ್ಲ, ಅದಾಗಲೇ; ಕಾಂಗ್ರೆಸ್- ಆಡಳಿತ ಯಂತ್ರದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಸ್ತಕ್ಷೇಪ ತೀವ್ರವಾಗಿರುವ ಆರೋಪ ಕೇಳಿ ಬಂದಿದೆ.
ಲೋಕೋಪಯೋಗಿ, ಇಂಧನ ಹಾಗೂ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್ ಗಳು, ಮುಖ್ಯ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಲಾಗಿದೆ.ಇದರಲ್ಲಿ ರೇವಣ್ಣ ಕೈವಾಡವಿದೆಯೆಂದು ಸಚಿವ ಡಿ.ಕೆ ಶಿವಕುಮಾರ್ ಕೆಂಡಾಮಂಡಲವಾಗಿದ್ದಾರೆ, ಆದರೆ ಎಲ್ಲಿಯೂ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿಲ್ಲ.
ತಮ್ಮ ಇಲಾಖೆಯಲ್ಲಿ ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಶಿವಕುಮಾರ್ ಸಿಎಂ ಕುಮಾರ ಸ್ವಾಮಿ ಗಮನಕ್ಕೆ ತಂದಿದ್ದಾರೆ. ಆದರೆ ಸಿಎಂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಸಾಮೂಹಿಕ ವರ್ಗಾವಣೆಯ ಹಿಂದೆ ಹೆಚ್.ಡಿ.ರೇವಣ್ಣ ಅವರ ಕೈವಾಡವಿದೆ ಎನ್ನಲಾಗಿದೆ.ಮುಖ್ಯ ಇಂಜಿನಿಯರ್ ಗಳ ವರ್ಗಾವಣೆ ಅಧಿಕಾರ ಇರುವುದು ಸಿಎಂ ಗೆ ಮಾತ್ರ.ಮೂರೂ ಇಲಾಖೆಯಲ್ಲಿದ್ದ ತಮಗೆ ಬೇಕಾದ ಅಧಿಕಾರಿಗಳನ್ನು ಹೆಚ್.ಡಿ.ರೇವಣ್ಣ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಭೆಯಲ್ಲಿ ಕೇವಲ ಸರ್ಕಾರ ಮತ್ತು ಪಕ್ಷ ಸಂಬಂಧ ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಸಲಾಯಿತು. ಬೇರೆ ಯಾವ ವಿಷಯವನ್ನು ಚರ್ಚಿಸಿಲ್ಲ ಎಂದು ಹೇಳಿದ್ದಾರೆ. ಸಿಎಂ ಕುಮಾರ ಸ್ವಾಮಿ ಕೂಡ ಆ ರೀತಿಯ ಯಾವುದೇ ದೂರುಗಳು ಕೇಳಿ ಬಂದಿಲ್ಲ ಎಂದು ಸ್ಪಷ್ಚ ಪಡಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿ ನೀರಾವರಿ ಇಲಾಖೆ ಸೇರಿದ ಅಧಿಕಾರಿಗಳನ್ನು ಶೀಘ್ರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಇಂತಹ ವಿಷಯಗಳು ಸಮ್ಮಿಶ್ರ ಸರ್ಕಾರದಲ್ಲಿ ಕಾಮನ್, ಅದನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ,ಸಿ ವೇಣುಗೋಪಾಲ್ ಹೇಳಿದ್ದಾರೆ.