ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದು ಪುಣೆಯ ಎಂಜಿನಿಯರ್ : ಎಸ್ ಐಟಿ ಅಧಿಕಾರಿಗಳು
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುತ್ತಾ ಹೋದ ಎಸ್ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು ಮಹಾರಾಷ್ಟ್ರ ರಾಜ್ಯದ ಪುಣೆಯ 37 ವರ್ಷದ ಎಂಜಿನಿಯರ್ ಅಮೋಲ್ ಕಾಳೆ.
ಈತ ಈ ಹಿಂದೆ ಗೌರಿ ಹತ್ಯೆ ಕೇಸಿಗೆ ಸಂಬಂಧಪಟ್ಟಂತೆ ಬಂಧಿತನಾಗಿದ್ದು ಈತನೇ ಹತ್ಯೆಗೆ ಸಂಚು ರೂಪಿಸಿದವನು ಎನ್ನಲಾಗುತ್ತಿದೆ. ತನ್ನ ಮನೋಧರ್ಮಕ್ಕೆ ಹತ್ತಿರವಾದವರನ್ನು ಕೃತ್ಯಗಳಿಗೆ ನೇಮಕ ಮಾಡುತ್ತಿದ್ದನಲ್ಲದೆ ಹತ್ಯೆಗೆ ಯೋಜನೆಯನ್ನು ವ್ಯವಸ್ಥಿತವಾಗಿ ರೂಪಿಸುತ್ತಿದ್ದ ಎನ್ನಲಾಗುತ್ತಿದೆ.
ಕಳೆದ ತಿಂಗಳು ಮೇ 21ರಂದು ಕಾಳೆಯನ್ನು ದಾವಣಗೆರೆಯಲ್ಲಿ ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದರು. ಅದು ಮೈಸೂರು ಮೂಲದ ಪ್ರಗತಿಪರ ಚಿಂತಕ ಕೆ ಎಸ್ ಭಗವಾನ್ ಕೊಲೆಗೆ ಪಿತೂರಿ ನಡೆಸಿದ ಶಂಕೆಯ ಮೇಲೆ. ಪಿಸ್ತೂಲ್ ಹಾರಿಸುವುದು ಹೇಗೆ ಎಂಬ ಬಗ್ಗೆ ಕಾಳೆಯೇ ಪರಶುರಾಮ ವಾಗ್ಮರೆಗೆ ತರಬೇತಿ ನೀಡಿದ್ದ ಎನ್ನಲಾಗುತ್ತಿದೆ. ಪರಶುರಾಮ ವಾಗ್ಮೆರೆಯೇ ತಾನು ಗೌರಿಯನ್ನು ಹತ್ಯೆ ಮಾಡಿದ್ದು ಎಂದು ಎಸ್ ಐಟಿ ಅಧಿಕಾರಿಗಳ ಮುಂದೆ ಒಂದು ಬಾರಿ ತಪ್ಪೊಪ್ಪಿಕೊಂಡಿದ್ದಾನೆ ಕೂಡ.
ಗೌರಿ ಹತ್ಯೆ ಕೇಸಿಗೆ ಸಂಬಂಧಪಟ್ಟಂತೆ ಕೆ ಟಿ ನವೀನ್ ಕುಮಾರ್, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಅಮೊಲ್ ಕಾಳೆ ಅಲಿಯಾಸ್ ಬಾಯಿಸಾಬ್, ಅಮಿತ್ ದೆಗ್ವೆಕರ್ ಅಲಿಯಾಸ್ ಪ್ರದೀಪ್ ಮಹಾಜನ್, ಮನೋಹರ್ ದುಂಡಪ್ಪ ಎಡವೆ ಅಲಿಯಾಸ್ ಮನೋಜ್ ಮತ್ತು ಪರಶುರಾಮ ವಾಗ್ಮೆರೆಯನ್ನು ಇದುವರೆಗೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ವಿಚಾರಣೆ ವೇಳೆ ಅಮಿತ್ ಹೊರತುಪಡಿಸಿ ಬೇರೆಲ್ಲರೂ ಗೊತ್ತಿದೆ. ಅವರನ್ನು ವಿವಿಧ ಧಾರ್ಮಿಕ ಸಭೆಗಳಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ಕಾಳೆ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾನೆ. ಅವರ ಮನವೊಲಿಸಿ ಹಿಂದೂ ಧರ್ಮ ರಕ್ಷಣೆಗೆ ಪ್ರಗತಿಪರ ಚಿಂತಕರೆನಿಸಿರುವರು ಹಿಂದೂ ಧರ್ಮಕ್ಕೆ ಅವಮಾನ ಮಾಡುತ್ತಿದ್ದು ಅವರ ಹತ್ಯೆಗೆ ಸಂಚು ರೂಪಿಸಿರುವುದಾಗಿ ಕಾಳೆ ಬಾಯ್ಬಿಟ್ಟಿದ್ದಾನೆ ಎನ್ನುತ್ತಾರೆ ಎಸ್ ಐಟಿ ಅಧಿಕಾರಿಗಳು.
ಗೌರಿ ಲಂಕೇಶ್ ನ್ನು ಹತ್ಯೆ ಮಾಡಲು ಸತಾರಾ ಮತ್ತು ಬೆಳಗಾವಿಯ ಹಲವು ಕಡೆಗಳಲ್ಲಿ ಹಿಂದೆ ಯೋಜನೆ ರೂಪಿಸಲಾಗಿತ್ತು. ಕಾಳೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ವಾಸಿಸುತ್ತಿದ್ದ. ಕೊಲೆಗೆ ಒಂದು ವಾರ ಮೊದಲು ಯೋಜನೆ ರೂಪಿಸಲಾಗಿತ್ತು. ಆತನ ಸೂಚನೆ ಪ್ರಕಾರ ಪರಶುರಾಮ ಸೆಪ್ಟೆಂಬರ್ 3ಕ್ಕೆ ಬೆಂಗಳೂರಿಗೆ ಬಂದಿದ್ದ. ಆತನನ್ನು ನವೀನ್ ಕಾಳೆ ಬಳಿಗೆ ಕರೆದುಕೊಂಡು ಹೋಗಿ ಕೊಲೆಗೆ ಸಂಚು ರೂಪಿಸಿದ್ದರು. ಇಲ್ಲಿ ಕಾಳೆ ಜೊತೆಗೆ ಮತ್ತೊಬ್ಬ ಅಣ್ಣಾ ಎಂದು ಕರೆಯಲ್ಪಡುವ ವ್ಯಕ್ತಿ ಕೂಡ ಇದ್ದನು ಎನ್ನುತ್ತಾರೆ ಅಧಿಕಾರಿಗಳು.
ಸೆಪ್ಟೆಂಬರ್ 4ರಂದು ಗೌರಿಯ ಕೊಲೆಗೆ ಮೊದಲ ಯತ್ನ: ಗೌರಿ ಕೊಲೆಯಾದ ಹಿಂದಿನ ದಿನವೇ ಕಾಳೆ ಪರಶುರಾಮನಿಗೆ ಕೊಲೆ ಮಾಡಲು ಸೂಚನೆ ನೀಡಿದ್ದನು. ಅಮೊಲ್ ಕಾಳೆ ಬೈಕ್ ಓಡಿಸುತ್ತಿದ್ದರೆ ಪರಶುರಾಮ ಹಿಂದೆ ಕುಳಿತಿದ್ದನು. ಆದರೆ ಅವರ ಯೋಜನೆ ಕೈಗೂಡಲಿಲ್ಲ. ಅಂದು ಗೌರಿ ತಡವಾಗಿ ಮನೆಗೆ ಹೋಗಿದ್ದರು.
ಸೆಪ್ಟೆಂಬರ್ 5ರಂದು ಅವರು ಗೌರಿ ಲಂಕೇಶ್ ಅವರ ರಾಜರಾಜೇಶ್ವರಿ ಮನೆ ಬಳಿ ಸಂಜೆ 6 ಗಂಟೆಯಿಂದ ಕಾಯುತ್ತಿದ್ದರು. ಗೌರಿ ಲಂಕೇಶ್ ರಾತ್ರಿ 8 ಗಂಟೆ ವೇಳೆಗೆ ಮನೆಗೆ ಆಗಮಿಸುತ್ತಿದ್ದ ವೇಳೆ ಬೈಕಿನಲ್ಲಿ ಅವರ ಹಿಂದೆ ಬರುತ್ತಾ ಗೇಟಿನ ಒಳಗೆ ಪ್ರವೇಶಿಸುವಾಗ ಪರಶುರಾಮ ಬಂದೂಕು ಹಾರಿಸಿದನು. ತಲೆಗೆ ಗುಂಡು ಹಾರಿಸುವ ಪ್ರಯತ್ನ ವಿಫಲವಾಯಿತು. ಮೊದಲ ಗುಂಡು ಮನೆಯ ಗೋಡೆಗೆ ಬಡಿಯಿತು. ನಂತರ ಗೌರಿಯನ್ನು ಕೊಲ್ಲುವ ತರಾತುರಿಯಲ್ಲಿ ಮತ್ತೆ 3-4 ಸುತ್ತು ಬಂದೂಕು ಹಾರಿಸಿ ಅಲ್ಲಿಂದ ಪರಾರಿಯಾದರು ಎನ್ನುತ್ತಾರೆ ಅಧಿಕಾರಿಗಳು.
ಕೊಲೆಯಾದ ನಂತರ ಕಾಳೆಯ ಮನೆಗೆ ಹೋಗಿ ಮರುದಿನ ಬೆಳಗ್ಗೆ ಪರಶುರಾಮ ಸಿಂಧಗಿಗೆ ರೈಲಿನಲ್ಲಿ ತೆರಳಿದನು. ಮತ್ತೆ ಒಂದೆರಡು ದಿನಗಳಲ್ಲಿ ಇತರ ಆರೋಪಿಗಳು ಸಹ ಬೆಂಗಳೂರು ತೊರೆದರು. ಆದರೆ ಅಣ್ಣಾ ಎಂಬ ವ್ಯಕ್ತಿ ಇನ್ನೂ ತಲೆಮರೆಸಿಕೊಂಡಿದ್ದಾನೆ.